Site icon TUNGATARANGA

ವಿಶ್ವದ ಅನೇಕ ರಾಷ್ಟ್ರಗಳು ಸಂಕಷ್ಟದಲ್ಲಿದ್ದರೂ ಭಾರತ ಮಾತ್ರ ಆರ್ಥಿಕತೆಯಲ್ಲಿ ಉನ್ನತಿಯತ್ತ ದಾಪುಗಾಲಿಡುತ್ತಿದೆ :ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಸಹಕಾರ ಸಂಘಗಳು ಬಲ ನೀಡುತ್ತಿವೆ. ಹಾಗಾಗಿ ವಿಶ್ವದ ಅನೇಕ ರಾಷ್ಟ್ರಗಳು ಸಂಕಷ್ಟದಲ್ಲಿದ್ದರೂ ಭಾರತ ಮಾತ್ರ ಆರ್ಥಿಕತೆಯಲ್ಲಿ ಉನ್ನತಿಯತ್ತ ದಾಪುಗಾಲಿಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.


ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಹಕಾರಿ ನಿಯಮಿತದ ಅಡಿ ನೋಂದಾಯಿತ ಜನತಾ ಬಜಾರ್‌ನ ರಜತ ಮಹೋತ್ಸವ ಉದ್ಘಾಟಿಸಿದ ಅವರು ಮಾತನಾಡಿದರು.
ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ನಿಲ್ಲುವುದಕ್ಕೆ ಸಹಕಾರ ಕ್ಷೇತ್ರಗಳದ್ದು ಸಿಂಹಪಾಲಿದೆ. ಕರೊನಾದಂತಹ ಕಷ್ಟದ ಸಂದರ್ಭಗಳಲ್ಲಿ ವಿಶ್ವದ ನಾನಾ ದೇಶಗಳ ಆರ್ಥಿಕತೆ ಮುಗ್ಗರಿಸಿದ್ದವು. ಆದರೆ ಭಾರತದ ಆರ್ಥಿಕತೆ ಮಾತ್ರ ಗಟ್ಟಿಯಾಗಿ ನಿಂತಿತ್ತು. ಸಹಕಾರ ಕ್ಷೇತ್ರಗಳ ಶ್ರಮ ಇದಕ್ಕೆ ಕಾರಣವಾಗಿದೆ ಎಂದರು.


ರಾಜ್ಯದಲ್ಲಿ ಪ್ರಸ್ತುತ ೬೦ ಲಕ್ಷ ಸದಸ್ಯರು ಸಹಕಾರ ಕ್ಷೇತ್ರದಲ್ಲಿದ್ದು, ೩೮ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ೨೮ ಸಾವಿರ ಕೋಟಿ ರೂ. ಸಾಲ ನೀಡಿದ್ದಾರೆ. ಇದು ಕಡಿಮೆ ಸಾಧನೆಯಲ್ಲ ಎಂದು ಹೇಳಿದರು.


ಹಲವು ಸಂಘಗಳು ಒಂದೆರಡು ವರ್ಷಗಳಲ್ಲೇ ನೆಲ ಕಚ್ಚುವುದನ್ನು ನಾವು ಕಂಡಿದ್ದೇವೆ. ಆದರೆ ಜಿಲ್ಲಾ ಕೇಂದ್ರ ಗ್ರಾಹಕರ ಸೌಹಾರ್ದ ಸಹಕಾರ ಸಂಘವು ೨೫ ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ರಜತ ಸಮಿತಿ ಉಪಾಧ್ಯಕ್ಷ ಎಚ್.ಎಸ್.ಮಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು. ಜಿಲ್ಲಾ ಗ್ರಾಹಕರ ಸೌಹಾರ್ದ ಸಂಘದ ಅಧ್ಯಕ್ಷ ಕೆ.ಎಸ್.ವಿಠಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ರಾಜ್ಯದ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ, ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್, ಸಹಕಾರಿ ಧುರೀಣ ಬಿ.ಡಿ.ಭೂಕಾಂತ್, ಸಂಘದ ನಿರ್ದೇಶಕರಾದ ನಾಗರಾಜ್ ಶೆಟ್ಟಿ, ಬಿ.ನಾಗರಾಜ, ಎಚ್.ಎನ್. ರವೀಶ್, ಕಾ.ರಾ. ನಾಗರಾಜ್, ಎಚ್.ಆರ್. ವೆಂಕಟೇಶ್ ಇತರರಿದ್ದರು.

Exit mobile version