Site icon TUNGATARANGA

ಜನವರಿ ತಿಂಗಳಿನಲ್ಲಿ ಶಿವಮೊಗ್ಗಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಗಮನ ಯಾಕೆ ಗೊತ್ತಾ ? ಸಂಪೂರ್ಣ ವಿವರ ನೋಡಿ

ಶಿವಮೊಗ್ಗ : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜನವರಿ ತಿಂಗಳಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ವೇಳೆ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಸುಂಕಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜನವರಿ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಶಂಕುಸ್ಥಾಪನೆಗೆ ಸಜ್ಜಾಗಿರುವ ೨,೧೩೮ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು ಹಾಗೂ ಈ ೧೩೯ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದರು.


ಪ್ರಮುಖವಾಗಿ ೫೩೮ ಕೋಟಿ ರೂ. ವೆಚ್ಚದಲ್ಲಿ ನೆಲ್ಲಿಸರ ಕ್ಯಾಂಪ್ ನಿಂದ ತೀರ್ಥಹಳ್ಳಿವರೆಗೆ, ೬೫೦ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಲಯನ್ ಸಫಾರಿಯಿಂದ ತಾಳಗುಪ್ಪದವರೆಗೆ ದ್ವಿಪಥ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಅಗಲೀಕರಣ ಮಾಡುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.


ಕಳಸವಳ್ಳಿ-ಸಿಗಂದೂರು ಸೇತುವೆ ಸಂಪರ್ಕ ರಸ್ತೆಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಹಿನ್ನೀರು ಹೆಚ್ಚಿದ್ದರೂ, ಕಡಿಮೆ ಇದ್ದರೂ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ನಿತಿನ್ ಗಡ್ಕರಿ ಅವರನ್ನೇ ಸ್ಥಳಕ್ಕೆ ಕರೆದೊಯ್ದು ಕಾಮಗಾರಿ ವೇಗಕ್ಕೆ ಏನೆಲ್ಲ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದರು.


ಬೈಂದೂರು-ರಾಣಿಬೆನ್ನೂರು ವಿಭಾಗದಲ್ಲಿ ೧೯.೭೭ ಕೋಟಿ ರೂ. ವೆಚ್ಚದಲ್ಲಿ ಸೇತುವೆ, ೫೫.೬೨ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿ ತುಂಗಾ ನದಿ ಸೇತುವೆ, ೪೩.೯೦ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ-ಚಿತ್ರದುರ್ಗ ನಡುವಿನ ರೈಲ್ವೆ ಮೇಲ್ಸೇತುವೆ (ಡಿಸೆಂಬರ್ ಅಂತ್ಯದೊಳಗೆ ಪೂರ್ಣ), ೨೦.೧೨ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಬೈಪಾಸ್‌ನಲ್ಲಿ ತುಂಗಾನದಿಗೆ ಸೇತುವೆ ಕಾಮಗಾರಿ ಮುಕ್ತಾಯಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ ಎಂದರು.

Exit mobile version