ಶಿವಮೊಗ್ಗ: ಶಬರಿಮಲೆ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೇರಳ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೇರಳ ಸಿಎಂ ರಾಜೀನಾಮೆ ನೀಡಬೇಕು ಎಂದು ಶಬರಿಮಲೆ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಎಂ.ಡಿ. ಸತೀಶ್ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕರ್ನಾಟಕದಿಂದ ಸಹಸ್ರಾರು ಜನ ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಆದರೆ, ಇಷ್ಟು ಕೆಟ್ಟ ಅನುಭವ ಯಾವತ್ತೂ ಆಗಿಲ್ಲ. ದೇವರ ದರ್ಶನ ಪಡೆಯಲು ೨೪ ಗಂಟೆ ಕಾಯುವಂತಹ ದುಸ್ಥಿತಿ ಇದೆ. ನೀರು, ಆಹಾರ, ಶೌಚಾಲಯಕ್ಕೆ ಪರದಾಡುವಂತಹ ಸ್ಥಿತಿ ಸರ್ಕಾರ ನಿರ್ಮಿಸಿದೆ. ಹಿಂದೆ ಸ್ಥಳೀಯರು ಮತ್ತು ಸಂಘ ಸಂಸ್ಥೆಗಳು ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸುತ್ತಿದ್ದರು. ಈ ಬಾರಿ ಸರ್ಕಾರ ಅದಕ್ಕೂ ಕತ್ತರಿ ಹಾಕಿದೆ ಎಂದು ದೂರಿದರು.
ಭಕ್ತರ ವಾಹನಗಳಿಗೆ ಅರ್ಧದಲ್ಲೇ ತಡೆದು ಸರ್ಕಾರದ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಸೂಕ್ತ ಬಸ್ ಇಲ್ಲದೇ ಸನ್ನಿಧಿಗೆ ತಲುಪಲು ಸಾಧ್ಯವಾಗದೇ ಕೆಲವರು ವಾಪಸ್ ಮರಳಿದ್ದಾರೆ. ಓರ್ವ ಬಾಲಕಿ ಅವ್ಯಸ್ಥೆಗೆ ಬಲಿಯಾಗಿದ್ದಾಳೆ. ಓರ್ವನ ಕಾಲು ಮುರಿದಿದೆ. ನೂಕು ನುಗ್ಗಲಿನ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಸರಿಯಾಗಿರಲಿಲ್ಲ. ರಾತ್ರಿ ದರ್ಶನಕ್ಕೆ ೧೨ ಗಂಟೆವರೆಗೆ ಅವಕಾಶ ನೀಡುತ್ತಿದ್ದರು. ಈ ಬಾರಿ ೧೦.೩೦ಕ್ಕೆ ಬಾಗಿಲು ಹಾಕಿ ಭಕ್ತಾದಿಗಳಿಗೆ ನಿರಾಶೆ ಮಾಡಿದ್ದಾರೆ ಎಂದರು.
ಪಂಪಾದಿಂದ ವರವೇಲು ಪತ್ತಡಕಟ್ಟದಲ್ಲಿ ವಾಹನ ತಡೆದು ನಿಲ್ಲಿಸಲಾಗುತ್ತದೆ. ನಿಂತ ಜಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸಿಲ್ಲ. ಭಕ್ತರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡಿದೆ. ತಕ್ಷಣ ಕೇರಳದ ಸಿಎಂ ಪಿಣರಾಯಿ ನೇತೃತ್ವದ ಸರ್ಕಾರ ಈ ಬಗ್ಗೆ ಕಾರ್ಯಪ್ರವೃತ್ತವಾಗೇಕು. ಕೇಂದ್ರ ಸರ್ಕಾರ ವರ್ಷಕ್ಕೆ ೩೫೦ ಕೋಟಿ ರೂ.ಗೂ ಹೆಚ್ಚು ಆದಾಯ ತರುವ ಈ ದೇವಾಲಯವನ್ನು ಪಾರಂಪರಿಕ ದೇವಸ್ಥಾನ ಎಂದು ಘೋಷಿಸಿ ತನ್ನ ತೆಕ್ಕೆಗೆ ತೆಗೆದುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ವಿನೋಬನಗರದ ಧರ್ಮಶಾಸ್ತ ದೇವಸ್ಥಾನದ ಸಂಚಾಲಕ ಕುಮಾರ್ ಮಾತನಾಡಿ, ಬಸ್ ಗಳನ್ನು ಮತ್ತು ಭಕ್ತರ ಖಾಸಗಿ ವಾಹನಗಳನ್ನು ಅನಾವಶ್ಯಕವಾಗಿ ತಡೆ ಹಿಡಿದು ಗೊಂದಲ ನಿರ್ಮಿಸಿದ್ದಾರೆ. ಪಂಪಾದಿಂದ ನೀಲಕಟ್ ಗೆ ೬೦ ಕಿ.ಮೀ.ದೂರವನ್ನು ಕೇವಲ ೨ ಗಂಟೆಯಲ್ಲಿ ತಲುಪುತ್ತಿದ್ದೆವು. ಈಗ ೬-೭ ಗಂಟೆ ಕಾಯಬೇಕಿದೆ. ಸನ್ನಿಧಾನದಲ್ಲಿ ಯಾವುದೇ ನೂಕು ನುಗ್ಗಲು ಇರಲಿಲ್ಲ. ಕ್ಯಾಂಟೀನ್ ಗಳೂ ಕೂಡ ಖಾಲಿಯಾಗಿದ್ದವು. ದಾರಿಯಲ್ಲಿ ಯಾಕೆ ಈ ರೀತಿಯ ಅಡೆ ತಡೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಾನು ಕೂಡ ಈ ದೇವಾಲಯಕ್ಕೆ ಎರಡು ಬಾರಿ ಹೋಗಿದ್ದೇನೆ. ಇಷ್ಟು ಕೆಟ್ಟ ವ್ಯವಸ್ಥೆ ಯಾವತ್ತೂ ಕೇಳಿಲ್ಲ. ಹಿಂದೂ ವಿರೋಧಿ ವ್ಯವಸ್ಥೆ ಇದು. ಅಲ್ಲಿನ ಆದಾಯದ ಹಣ ಸರ್ಕಾರಕ್ಕೆ ಜಮಾ ಆಗಿದೆ. ಆದರೆ, ಸರ್ಕಾರ ಮೂಲ ಸೌಲಭ್ಯ ಕಲ್ಪಿಸಿಲ್ಲ. ಕೇರಳ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅವ್ಯವಸ್ಥೆ ಬಗ್ಗೆ ಎಡಿಜಿಪಿ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ನೀಡಲು ಆದೇಶಿಸಿದೆ ಎಂದರು.
ದೇಶದಿಂದ ಲಕ್ಷಾಂತರ ಭಕ್ತರು ಅನೇಕ ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಾರೆ. ಎಲ್ಲಾ ಕಡೆ ಊಟ, ವಸತಿ ವ್ಯವಸ್ಥೆ ಇದೆ. ಎಲ್ಲೂ ಇಲ್ಲದ ಸಮಸ್ಯೆ ಅಲ್ಲಿ ಯಾಕೆ? ಆನ್ ಲೈನ್ ಬುಕ್ಕಿಂಗ್ ಹೆಸರಲ್ಲೂ ಕೂಡ ಮೋಸ ಆಗಿದೆ. ಬುಕ್ಕಿಂಗ್ ಮಾಡಿದವರಿಗೆ ಕೂಡ ವಾಹನಗಳು ಲಭ್ಯವಾಗಿಲ್ಲ, ದರ್ಶನಕ್ಕೆ ಅವಕಾಶ ವಿಳಂಬವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದೇವಸ್ಥಾನ ಮಂಡಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಅಯ್ಯಪ್ಪ ಸ್ವಾಮಿ ಸಮಿತಿಯ ಒಕ್ಕೂಟಗಳು ಎಲ್ಲರೂ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಇದೊಂದು ದೊಡ್ಡ ಆಂದೋಲನವಾಗಲಿದೆ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.
ಪೊಲೀಸ್ ಇಲಾಖೆ ಸೂಕ್ತ ಯೋಜನೆ ಮಾಡದೇ ಇರುವುದೇ ಈ ಲೋಪಗಳಿಗೆ ಕಾರಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು