Site icon TUNGATARANGA

ಲೆಕ್ಕಪತ್ರ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು : ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ


ಶಿವಮೊಗ್ಗ : ಡಿಸೆಂಬರ್ ೧೫ :

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರ ೬೭ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ ೧೬ರಂದು ಮಧ್ಯಾಹ್ನ ೨ರಿಂದ ೪ಗಂಟೆಯವರೆಗೆ ನಗರದ ಒಂದು ಪರೀಕ್ಷಾ ಕೇಂದ್ರದಲ್ಲಿ ಹಾಗೂ ಡಿಸೆಂಬರ್ ೧೭ರಂದು ಬೆಳಿಗ್ಗೆ ೧೦ರಿಂದ ೧೧.೩೦ರವರೆಗೆ ಹಾಗೂ ಮಧ್ಯಾಹ್ನ ೨ರಿಂದ ೪ಗಂಟೆಯವರೆಗೆ ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರು ಹೇಳಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಡಿ.೧೬ರಂದು ಒಂದು ಕೇಂದ್ರದಲ್ಲಿ ನಡೆಯಲಿರುವ ಕನ್ನಡ ಭಾಷಾ ಪರೀಕ್ಷೆಗೆ ೨೮ಮಂದಿ ಭಾಗವಹಿಸಲಿದ್ದಾರೆ. ಡಿ.೧೭ರಂದು ನಡೆಯುವ ಸಾಮಾನ್ಯಜ್ಞಾನ, ಸಾಮಾನ್ಯ ಕನ್ನಡ, ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯಗಳ ಪರೀಕ್ಷೆಗೆ ಮೊದಲ ಅಧಿವೇಷನದಲ್ಲಿ ೫೬೨ಅಭ್ಯರ್ಥಿಗಳು ಹಾಗೂ ಎರಡನೇ ಅಧಿವೇಶನದಲ್ಲಿ ೫೬೩ ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದವರು ನುಡಿದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧಾತ್ಮಕ ಪರೀಕ್ಷೆಯು ಪಾರದರ್ಶಕ, ನ್ಯಾಯಸಮ್ಮತವಾಗಿ, ನಿಷ್ಪಕ್ಷಪಾತವಾಗಿ ನಡೆಯಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿ ಸಿಬ್ಬಂಧಿಗಳು ತಮ್ಮ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸದಂತೆ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದರು.


ಈಗಾಗಲೇ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ವೀಕ್ಷಕರು, ಮಾರ್ಗಾಧಿಕಾರಿಗಳು ಹಾಗೂ ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದೆ. ಪರೀಕ್ಷೆಗಳು ಶಾಂತಿಯುತವಾಗಿ ನಡೆಯಲು ಹಾಗೂ ಈ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲು ಪೊಲೀಸ್ ಸಿಬ್ಬಂಧಿಗಳ ಸಹಕಾರವನ್ನು ಕೋರಲಾಗಿದೆ. ಅಂತೆಯೇ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರದ ಸುತ್ತಮುತ್ತಲಿನ ೨೦೦ಮೀ.ಪ್ರದೇಶದ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ಕೇಂದ್ರದೊಳಗೆ ಸಹಜವಾದ ಸಮವಸ್ತ್ರವನ್ನು ಧರಿಸಿ ಬರಬೇಕು. ಸಾಂಪ್ರದಾಯಿಕ ಆಭರಣಗಳನ್ನು ಹೊರತುಪಡಿಸಿ ಇತರೆ ಆಭರಣಗಳನ್ನು ಧರಿಸುವುದು, ವಿದ್ಯುನ್ಮಾನ ಯಂತ್ರಗಳು, ಸ್ಮಾರ್ಟ್‌ವಾಚ್‌ಗಳು, ಕ್ಯಾಲ್ಕ್ಯುಲೇಟರ್ ಇತ್ಯಾದಿಗಳು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿರುವ ಅವರು, ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವುದು, ಶುದ್ಧ ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.


ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಲೋಕಸೇವಾ ಆಯೋಗದ ನೋಡಲ್ ಅಧಿಕಾರಿ ತಿಮ್ಮಣ್ಣ ಎಂ.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Exit mobile version