ಶಿವಮೊಗ್ಗ: ಇತ್ತೀಚೆಗೆ ಭದ್ರಾವತಿಯಲ್ಲಿ ಗೋಕುಲ್ ಕೃಷ್ಣ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಘಟನೆಯನ್ನು ಬಿಜೆಪಿಯವರು ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಹಾಗೂ ಭದ್ರಾವತಿ ಶಾಸಕರಿಗೂ ಯಾವ ಸಂಬಂಧವೂ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹಾಗೂ ಭದ್ರಾವತಿ ಕಾಂಗ್ರೆಸ್ ಮುಖಂಡ ಬಿ.ಕೆ. ಮೋಹನ್ ಹೇಳಿದ್ದಾರೆ.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಕುಲ್ ಎಂಬಾತ ರೌಡಿ ಹಿನ್ನಲೆಯುಳ್ಳವನಾಗಿದ್ದಾನೆ. ಆತ ಪಾಲಿಕೆ ಸಿಬ್ಬಂದಿಗಳನ್ನಲ್ಲದೇ ದಲಿತರನ್ನು ಕೂಡ ಹೀಯಾಳಿಸುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನ ಕುಮಾರ್ ಎಂಬುವರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾನೆ. ಫೋನ್ ಮೂಲಕ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದರು.
ಹೋಟೆಲ್ ವೊಂದರಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದ್ದಾಗ ಕುಮಾರ್ ಗೆ ಫೋನ್ ಮಾಡಿ ನೀನು ಎಲ್ಲೇ ಇರು ಅಲ್ಲಿಗೆ ಬರುತ್ತೇನೆ ಎಂದು ರೌಡಿಸಂ ಮಾಡಿ ಸಭೆ ನಡೆಯುತ್ತಿದ್ದ ಜಾಗಕ್ಕೆ ಬಂದು ಗಲಾಟೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಕುಮಾರ್ ಅವರ ಕಾರ್ ಚಾಲಕ ತಡೆಯಲು ಹೋಗಿದ್ದಾನೆ. ಈ ಗಲಾಟೆಯನ್ನಿಟ್ಟುಕೊಂಡು ಬಿಜೆಪಿಯವರು ಇದನ್ನು ಅತಿದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ. ಸದನದಲ್ಲೂ ಪ್ರಸ್ತಾಪ ಮಾಡಿ ಶಾಸಕ ಸಂಗಮೇಶ್ ಹಾಗೂ ಅವರ ಪುತ್ರನನ್ನು ಮಧ್ಯ ತರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಈ ಬಿಜೆಪಿಯವರು ಸಲ್ಲದ ಕೆಲಸ ಮಾಡಲು ಹೊರಟಿದ್ದಾರೆ.
ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಘಟನೆಗಳು ಇದೇ ರೀತಿ ಆಗಿರುತ್ತವೆ. ಈ ಬಿಜೆಪಿಯವರಿಗೆ ಅಶಾಂತಿ ಹುಟ್ಟಿಸುವುದೇ ಒಂದು ವೃತ್ತಿಯಾಗಿದೆ ಎಂದರು.
ಭದ್ರಾವತಿಯಲ್ಲಿ ಜೂಜು, ಮಟ್ಕಾ, ಇಸ್ಪೀಟ್, ಗಾಂಜಾ, ಗೂಂಡಾಗಿರಿ ಮುಂತಾದವು ನಡೆಯುತ್ತಿವೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಇದು ಎರಡು ತಿಂಗಳಿಂದ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ಹಿಂದೆ ಶಾಸಕರಾಗಿದ್ದ ಅಪ್ಪಾಜಿ ಅವರ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ನಡೆದಿವೆ. ಕಾಂಗ್ರೆಸ್ ನ ಯಾವ ಕಾರ್ಯಕರ್ತರು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇದರಲ್ಲಿ ಭಾಗಿಯಾರುವವರು, ಆಗುತ್ತಿರುವವರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರೇ ಎಂದು ದೂರಿದರು.
ಈ ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,
ಆದರೆ ವಿನಾಕಾರಣ ಶಾಸಕರ ಹೆಸರನ್ನು ಮಧ್ಯೆ ತರುವುದು ಸರಿಯಲ್ಲ. ತಕ್ಷಣವೇ ಅವರ ತೇಜೋವಧೆ ನಿಲ್ಲಿಸಬೇಕು. ಗೋಕುಲ್ ಮತ್ತು ಆತನ ಸಹಚರರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂಸತ್ ನಲ್ಲಿ ನಿನ್ನೆ ನಡೆದ ಘಟನೆ ದಿಗ್ಭ್ರಮೆಗೊಳಿಸುವಂತಹುದ್ದು. ಭದ್ರತೆ ಎಲ್ಲಿದೆ ಎಂಬ ಪ್ರಶ್ನೆ ಇಡೀ ದೇಶದ ಸಾರ್ವಜನಿಕರನ್ನು ಕಾಡುತ್ತಿದೆ. ಇದು ಪ್ರಯೋಗ ಮಾತ್ರ. ಮುಂದೆ ಬಹುದೊಡ್ಡ ಅಪಾಯದ ಸೂಚನೆ ಇದೆ. ಸಂಪೂರ್ಣ ತನಿಖೆಯಾಗಬೇಕು. ಎಚ್ಚರಿಕೆಯ ಗಂಟೆ ಇದು ಎಂದು ಆಯನೂರು ಮಂಜುನಾಥ್ ತಿಳಿಸಿದರು.
ಪಕ್ಷಾತೀತವಾಗಿ ಇದನ್ನು ಖಂಡಿಸಬೇಕು. ಹಾಗೆಯೇ ಬೇರೆ ಬೇರೆ ರಾಜ್ಯದ ಯುವಕರು ಇದರಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಸಂಸದ ಪಾಸ್ ಕೊಟ್ಟಿದ್ದಾಗಿ ತಿಳಿದು ಬಂದಿದೆ. ಇದು ಕೂಡ ತನಿಖೆಯಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಸ್. ಸುಂದರೇಶ್, ಬಲ್ಕೀಶ್ ಭಾನು, ಸಿ.ಎಂ. ಖಾದರ್, ವೈ.ಹೆಚ್. ನಾಗರಾಜ್, ಎಸ್.ಟಿ. ಚಂದ್ರಶೇಖರ್, ಷಡಾಕ್ಷರಿ, ಸುದೀಪ್, ಸೇರಿದಂತೆ ಹಲವರಿದ್ದರು.