ಶಿವಮೊಗ್ಗ : ಯುವ ಸಮೂಹ ವಿಷಯಾಂತರದ ಆಕರ್ಷಣೆಗಳಿಗೆ ಒಳಗಾಗದೆಯೇ ವಿದ್ಯಾರ್ಜನೆ ಒಂದೇ ಮೂಲಭೂತ ಕರ್ತವ್ಯವಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಕೋಟೆ ಪೋಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹದಲ್ಲಿನ ಸಕಾರಾತ್ಮಕ ಯೋಚನೆಗಳು ಕಲುಷಿತಗೊಂಡಾಗ ದೇಶ ಅಧೋಗತಿಗೆ ತಲುಪುತ್ತದೆ. ಕೋಮುಗಲಭೆಗಳಿಗೆ ಯುವ ಸಮೂಹದ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇಂತಹ ಅಂಧತ್ವಕ್ಕೆ ಒಳಗಾಗದೇ ಸಮಾಜಮುಖಿ ಸಕಾರಾತ್ಮಕ ಆಲೊಚನೆಗಳತ್ತ ಚಿತ್ತ ಹರಿಸಿ.
ಸಮಾಜದಲ್ಲಿ ಅಪರಾಧವೆಂಬುದು ಸಹಜ. ಒಳಿತು ಕೆಡುಕುಗಳ ಭಿನ್ನತೆಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಜವಬ್ದಾರಿಯಾಗಿದೆ. ಬಿಸಿ ರಕ್ತದ ವಯಸ್ಸಿನಲ್ಲಿ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ಬಳಸಿ. ವಿಷಯಾಂತರದ ಆಕರ್ಷಣೆಗಳೇ ಕಾನೂನು ಸಂಘರ್ಷಗಳ ಪ್ರಾರಂಭಿಕ ಹಂತ ಎಂದು ಹೇಳಿದರು.
ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುವಾಗ ಮೂಲಭೂತ ಕರ್ತವ್ಯಗಳು ನಮ್ಮ ಮುಂದಿದೆ ಎನ್ನುವುದನ್ನು ಸದಾ ನೆನಪಿನಲ್ಲಿಡಿ. ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುವ ಪ್ರತಿಯೊಂದು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸೈಬರ್ ಕ್ರೈಮ್ ಪ್ರತಿದಿನದ ದೈನಂದಿನ ಪ್ರಕರಣಗಳಾಗಿದ್ದು, ತಂತ್ರಜ್ಞಾನವನ್ನು ಸಮಾಜದ ಅಭ್ಯುದಯಕ್ಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಿ. ಮೊಬೈಲ್ ನಲ್ಲಿಯೆ ಬದುಕಿನ ಅಮೂಲ್ಯವಾದ ಕ್ಷಣಗಳನ್ನು ಕಳೆಯದಿರಿ.
ನಮಗೆ ಬರುವ ಒಟಿಪಿಗಳು ಅತ್ಯಂತ ಗೌಪ್ಯವಾದ ವಿಚಾರವಾಗಿದೆ. ಸೈಬರ್ ಅಪರಾಧಗಳನ್ನು ತಡೆಯಲು ಬಳಕೆದಾರರಾದ ನಮ್ಮಿಂದಲೇ ಸಾಧ್ಯವಿದೆ. ಯಾವುದೇ ಆಕರ್ಷಕ ಕರೆಗಳಿಗೆ ಮಾರುಹೋಗದೆ ವಿಮರ್ಶಿಸಲು ಪ್ರಾರಂಭಿಸಿ. ಇದರಿಂದ ಅನೇಕ ಅಪರಾಧಗಳನ್ನು ತಡೆಯಬಹುದು. ಆಧುನಿಕತೆಯಿಂದ ಎಲ್ಲವೂ ಸಾಧ್ಯ ಎನ್ನುವ ಭ್ರಮೆ ಬೇಡ.
ಪ್ರತಿಯೊಂದು ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ನಿರ್ವಹಣೆ ಕುರಿತ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಯಾವುದೇ ಪೋಲೀಸ್ ಠಾಣೆಯಲ್ಲಿ ಸೈಬರ್ ಅಪರಾಧಗಳ ಕುರಿತಾಗಿ ದೂರು ದಾಖಲಿಸಬಹುದಾಗಿದೆ. ವಾಹನಗಳನ್ನು ಚಲಾಯಿಸುವಾಗ ಜವಾಬ್ದಾರಿಯಿಂದ ವರ್ತಿಸಿ. ರಸ್ತೆ ಪ್ರತಿಯೊಬ್ಬ ಜನ ಸಾಮಾನ್ಯರ ಆಸ್ತಿ. ರಸ್ತೆಯ ಸ್ವಚ್ಚತೆ, ಬಳಕೆ, ಕಾನೂನಿನಾತ್ಮಕ ಉಲ್ಲಂಘನೆಗಳ ಅರಿವು ಅತ್ಯಗತ್ಯ. ಡಿಜಿಲಾಕರ್ ಮೂಲಕ ವಾಹನ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿಕೊಳ್ಳಿ.
ಇಂದಿನ ಯುವ ಸಮೂಹದಲ್ಲಿ ಸೌಜನ್ಯತೆಯ ಕೊರತೆಯಿದೆ. ಯಾರು ನಮ್ಮನ್ನು ಪ್ರಶ್ನಿಸಬಾರದು ಎಂಬ ನಿರಂಕುಶಮತಿತ್ವ ಬೇಡ. ಇಂತಹ ಹಠಮಾರಿ ಧೋರಣೆಗಳು ನಮ್ಮ ವ್ಯಕ್ತಿತ್ವಗಳ ಉನ್ನತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ಕಾನೂನಿನ ಅಗತ್ಯವಾದ ಅರಿವು ಪಡೆದು ಜವಾಬ್ದಾರಿಯುತ ಪ್ರಜೆಗಳಾಗಿ ವರ್ತಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೋಟೆ ಪೋಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ರವಿಕುಮಾರ್ ಕರ್ನಾಟಕ ಸ್ಟೇಟ್ ಪೋಲೀಸ್ ಆ್ಯಪ್ ಹಾಗೂ ವಿವಿಧ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಉಪನ್ಯಾಸಕರಾದ ಲಕ್ಷ್ಮಣ.ಕೆ ಸೇರಿದಂತೆ ಕೋಟೆ ಪೋಲೀಸ್ ಠಾಣೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.