Site icon TUNGATARANGA

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ತಕ್ಷಣವೇ ರದ್ದುಪಡಿಸಲು ಆಗ್ರಹಿಸಿ / ಡಿ.14 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಶಿವಮೊಗ್ಗ,ಡಿ.೧೨: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ತಕ್ಷಣವೇ ರದ್ದುಪಡಿಸಲು ಆಗ್ರಹಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ(ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯ)ಡಿ.೧೪ರಂದು ಬೆಳಿಗ್ಗೆ ೧೧ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ.ನಾನ್ಯನಾಯ್ಕ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಿಂದಿನ ಸರ್ಕಾರದಿಂದ ತಿರಸ್ಕರಸಲ್ಪಟ್ಟಿರುವ ಈ ಆಯೋಗದ ವರದಿಯನ್ನು ಈಗಿನ ಸರ್ಕಾರದ ಕೆಲವು ಸಚಿವರು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಒಂದು ಸಮುದಾಯವನ್ನು ಮುಂದಿಟ್ಟುಕೊಂಡು ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದಲೇ ಪ್ರತ್ಯೇಕಿಸುವ ಹುನ್ನಾರ ನಡೆದಿದೆ. ಈ ವರದಿ ಅನುಷ್ಠಾನಗೊಂಡರೆ ನಮ್ಮ ಸಮುದಾಯಗಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದರು.


ಸರಿಯಾದ ಸಮೀಕ್ಷೆ ನಡೆಯದೆ ಕೆಲವರ ಒತ್ತಾಸೆಗಾಗಿ ಮಣಿದು ತರಾತುರಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಮತ್ತು ಈಗಾಗಲೇ ಸೋರಿಕೆಯಾಗಿರುವ ಈ ವರದಿಯ ಸುತ್ತ ಅನುಮಾನ, ಆತಂಕದಿಂದ ಕೂಡಿದೆ. ಮತ್ತು ದೋಷಪೂರಿತ ವರದಿಯಾಗಿದೆ.ನಮ್ಮ ನಮ್ಮಲ್ಲಿಯೇ ದ್ವೇಷ ಬಿತ್ತಲಾಗುತ್ತಿದೆ. ಇದು ತುಂಬ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಹಾಗಾಗಿ ಈ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬಾರದು ಮತ್ತು ಶಿಫಾರಸ್ಸು ಮಾಡಬಾರದು ಎಂದು ಆಗ್ರಹಿಸಿದರು.


ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲವೆಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿದೆ. ಬಿಜೆಪಿ ಸರ್ಕಾರ ಇದ್ದಾಗ ಇದು ಅನುಷ್ಠಾನಗೊಳ್ಳಬಾರದು ಎಂದು ಕೇಂದ್ರಕ್ಕೆ ಶಿಫಾರಸ್ಸು ಕೂಡ ಮಾಡಲಾಗಿದೆ. ಆದರೂ ಕೂಡ ಈಗಿನ ಸರ್ಕಾರ ಇದನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಕೆಲವು ಸಚಿವರು ಮತ್ತು ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದರು.


ಡಿ.೧೪ರಂದು ಬೆಳಿಗ್ಗೆ ೧೧ಕ್ಕೆ ಮಹಾನಗರ ಪಾಲಿಕೆ ಆವರಣದಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಬೋವಿ, ಬಂಜಾರ, ಕೊರಚ, ಕೊರಮ, ದೊಂಬಿದಾಸ, ಸಿಳ್ಳೆಕ್ಯಾತ ಮುಂತಾದ ೯೯ ಪರಿಶಿಷ್ಟ ಜಾತಿಗಳ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್. ಜಗದೀಶ್, ಬೋವಿ ಸಮಾಜದ ಜಿಲ್ಲಾ ಸಂಚಾಲಕ ಧೀರರಾಜ್‌ಹೊನ್ನಾವಿಲೆ, ಬಂಜಾರ ಸಮಾಜದ ಮುಖಂಡ ಹಾಗೂ ಒಕ್ಕೂಟದ ಸಂಚಾಲಕ ನಾಗೇಶ್ ನಾಯ್ಕ, ಕುಮಾರ ನಾಯ್ಕ, ಕೊರಚ ಸಮಾಜದ ಅನಿಲ್‌ಕುಮಾರ್, ಬೋವಿ ಸಮಾಜದ ಬಿ.ಜಗದೀಶ್, ತಿಮ್ಮಾರಾಜು ಸೇರಿದಂತೆ ಹಲವರಿದ್ದರು.

Exit mobile version