Site icon TUNGATARANGA

ಬಿಜೆಪಿ ಒಂದು ವಿರೋಧ ಪಕ್ಷವಾಗಿ ಸರ್ಕಾರದ ಜೊತೆ ಹೋರಾಟ ಮಾಡುವುದನ್ನು ಬಿಟ್ಟು /ವಿಭಿನ್ನ ನಡೆಯಿಂದ ತನ್ನ ದೌರ್ಬಲ್ಯವನ್ನು ಪ್ರಕಟಿಸಿದೆ: ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್ ಟೀಕೆ

ಶಿವಮೊಗ್ಗ,ಡಿ.11:

ಬೆಳಗಾವಿ ಅಧಿವೇಶನವನ್ನು ವಿಫಲಗೊಳಿಸಿದ ಅಪಕೀರ್ತಿ ಬಿಜೆಪಿ ಸಲ್ಲುತ್ತದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದವು. ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತರಕರ್ನಾಟಕದ ಜ್ವಲಂತ ಸಮಸ್ಯೆಗಳಿದ್ದವು. ಒಂದು ವಿರೋಧ ಪಕ್ಷವಾಗಿ ಸದನದಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಿಟ್ಟು ಬೇಡವಾದ ವಿಷಯಕ್ಕೆ ಮಹತ್ವ ಕೊಟ್ಟು ಸದನದ ಸಮಯವನ್ನು ವ್ಯರ್ಥ ಮಾಡಿದರು. ಒಂದು ವಿರೋಧ ಪಕ್ಷವಾಗಿ ಸರ್ಕಾರದ ಜೊತೆ ಹೋರಾಟ ಮಾಡುವುದನ್ನು ಬಿಟ್ಟು ವಿಭಿನ್ನ ನಡೆಯಿಂದ ತನ್ನ ದೌರ್ಬಲ್ಯವನ್ನು ಪ್ರಕಟಿಸಿದೆ ಎಂದರು.


ಬಿಜೆಪಿ ಆಂತರಿಕ ಬೇಗುದಿ ಇಲ್ಲಿ ಸ್ಪಷ್ಟವಾಗಿ ಎದ್ದುಕಂಡಿತು. ಬಿಜೆಪಿಯ ನಾಯಕರುಗಳ ಮಧ್ಯೆಯೇ ಸಾಮರಸ್ಯ ಇರಲಿಲ್ಲ. ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ಶಾಸಕರು ಬೇರೆ ಬೇರೆ ರೀತಿ ಮಾತನಾಡಿದರು.

ಯತ್ನಾಳ್ ಅಪಸ್ವರ ಎತ್ತಿದರು. ವಿಧಾನಪರಿಷತ್‌ನಲ್ಲಿ ಸಹ ಇದೇ ಹಣೆಬರಹ. ವಿರೋಧ ಪಕ್ಷದ ನಾಯಕರೂ ಸಹ ಇರಲಿಲ್ಲ. ಮೊಟ್ಟ ಮೊದಲ ಬಾರಿಗೆ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕನಿಲ್ಲದೇ ಸಭೆ ನಡೆದಿದೆ. ಬಿಜೆಪಿಗೆ ಸದನವನ್ನು ಹಾಳುಗೆಡವಿದ ಅಪಕೀರ್ತಿ ತಟ್ಟಿದೆ. ವಿಫಲತೆಯ ತುತ್ತತುದಿಯನ್ನು ಬಿಜೆಪಿ ಮುಟ್ಟಿದೆ ಎಂದು ಆರೋಪಿಸಿದರು.


ಯತ್ನಾಳ್ ಹೇಳಿದಂತೆ ಬಿಜೆಪಿಯ ಎಲ್ಲಾ ಹುದ್ದೆಗಳು ಮಾರಾಟಕ್ಕೆ ಇವೆ. ಇಲ್ಲಿ ಕೋಟಿಗಟ್ಟಲೆ ದುಡ್ಡು ಇದ್ದವರಿಗೆ ಮಣೆಯಾಲಾಗುತ್ತಿದೆ. ಎಲ್ಲಾ ಅಧಿಕಾರಗಳು ಲಭ್ಯವಾಗುತ್ತವೆ. ಈಮಾತನ್ನು ಬಿಜೆಪಿಯ ಮುಖಂಡರೇ ಹೇಳುತ್ತಾಳೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ಹುದ್ದೆಯೂ ಖಾಲಿ ಇದ್ದು, ಮಾರಾಟಕ್ಕೆ ಇದೆ ಎಂದು ವ್ಯಂಗ್ಯ ಮಾಡಿದರು.


ರಾಜ್ಯಾಧ್ಯಕ್ಷ ಬಿ.ವೈ.ವಿಜಯೆಂದ್ರ ಹಲವು ಬಾರಿ ದೆಹಲಿಗೆ ಹೋಗಿದ್ದಾರೆ. ಕರ್ನಾಟಕ ಜನರ ಸಂಕಷ್ಟದ ಬಗ್ಗೆ ಗಮನಕ್ಕೆ ತಂದಿದ್ದಾರೆಯೇ, ರಾಜ್ಯದ ೨೫ ಸಂಸದರು ಎಲ್ಲಿಗೆ ಹೋಗಿದ್ದಾರೆ. ಕೇಂದ್ರದ ಮನವೊಲಿಸಿ ಕರ್ನಾಟಕ ರಾಜ್ಯಕ್ಕೆ ಅನುದಾನವನ್ನು ತರಬಾರದೆ. ಆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕರ್ನಾಟಕ ಸರ್ಕಾರ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಆದರೆ, ಹೊಡೆದ ಮನೆಯಾಗಿರುವ ಬಿಜೆಪಿ ರಾಜ್ಯಕ್ಕಾಗಿ ಏನು ಮಾಡಿದೆ. ಈಗಲೂ ಸಮಯವಿದೆ ಇವರೆಲ್ಲರೂ ಕೇಂದ್ರಕ್ಕೆ ಹೋಗಿ ರಾಜ್ಯಕ್ಕೆ ಅನುದಾನ ತರಲಿ ಎಂದರು.


ಇತ್ತೀಚೆಗೆ ವೀರಶೈವ ಮಠಾಧೀಶ್ವರರು ಸಾರ್ಥಕ ಸುವರ್ಣ ಹೆಸರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರರಿಗೆ ಅಭಿನಂದನೆ ಸಲ್ಲಿಸಿದ್ದನ್ನು ಟೀಕಿಸಿದ ಆಯನೂರು, ಮಠಾಧೀಶ್ವರರು ವ್ಯಕ್ತಿ ಪೂಜೆ ಮಾಡಬಾರದು. ಒಂದು ಪಕ್ಷದ ವಕಾಲತ್ತು ಮಾಡುವುದು ಸರಿಯಲ್ಲ. ಅಧಿಕಾರವನ್ನು ಓಲೈಸುವ ಶ್ರೀಮಂತಿಕೆಯನ್ನು ಬೆಂಬಲಿಸುವ ಇಂತಹ ಕಾರ್ಯಕ್ರಮಗಳು ಬಿಜೆಪಿಯ ಪ್ರಾಯೋಜಿತ ಕಾರ್ಯಕ್ರಮ ಎಂದರು.
ಹಾಗೇ ನೋಡಿದರೆ, ಉದ್ಯಮಿ ರುದ್ರೇಗೌಡರು ಸಾಕಷ್ಟು ಕೆಲಸ ಮಾಡಿದ್ದಾರೆ. ಶಿವಮೊಗ್ಗದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಈ ಮಠಾಧೀಶ್ವರರ ಕಣ್ಣಿಗೆ ಬೀಳಲಿಲ್ಲ್ಲವೆ. ಮಾಜಿ ಮುಖ್ಯಮಂತ್ರಿಯ ಮಗ, ಒಂದಿಷ್ಟು ಮಠಗಳಿಗೆ ದುಡ್ಡು ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಇಂತಹ ಕಾರ್ಯಕ್ರಮ ಮಾಡಿರುವುದು ಓಲೈಸುವ ತಂತ್ರವಲ್ಲದೆ ಮತ್ತೇನೆ ಅಲ್ಲ. ಮಠಾಧೀಶ್ವರರು ಬಿಜೆಪಿಯ ಪ್ರಚಾರಕರಾಗಬಾರದು ಎಂದರು.


ಕೆಲವೇ ದಿವಸಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಕೆಲವು ರಾಜಕಾರಣಿಗಳು ಭವಿಷ್ಯ ಹೇಳುವುದನ್ನು ಕಲಿತಿದ್ದಾರೆ. ಅವರ ಭವಿಷ್ಯವೇ ಅವರಿಗೆ ಗೊತ್ತಿರುವುದಿಲ್ಲ. ಇವರೆಲ್ಲ ಹೋರಿ ಹಿಂದೆ ಹೋಗುವ ನರಿಗಳಿದ್ದಂತೆ ಗಿಣಿರಾಮರು ಎಂದು ವ್ಯಂಗ್ಯವಾಡಿದರು.


ಕೆ.ಎಸ್.ಈಶ್ವರಪ್ಪನವರು ನಿಮ್ಮ ಸುದ್ಧಿಯನ್ನೇ ಎತ್ತುತ್ತಿಲ್ಲ. ನಿಮ್ಮನ್ನು ಕಂಡರೇ ಭಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನನಗೆ ಗೊತ್ತಿಲ್ಲ ಆದರೆ ಒಬ್ಬ ಸಚಿವರಿಗೆ ಅದರಲ್ಲೂ ನೀರಾವರಿ ಸಚಿವರಾಗಿ, ಕಂದಾಯ ಸಚಿವರಾಗಿ ಇಂತಹ ಸಂದರ್ಭದಲ್ಲಿ ಕರ್ನಾಟಕದ ಸ್ಥಿತಿಯನ್ನು ಗಮನಿಸುವುದನ್ನು ಬಿಟ್ಟು ಬೇರೆ ಯಾವುದೇ ವಿಷಯಗಳಿಗೆ ತಲೆ ಹಾಕುತ್ತಿದ್ದಾರೆ. ಅವರ ಕೊಳವೆ ಬಾವಿ, ಜಲ ಜೀವನ್ ಮಿಷನ್ ಏನುಯಾಗಿದೆ ಎಂದು ನನಗೆ ಗೊತ್ತು. ಅವರಿಗೆ ಜ್ಞಾನ ಭಂಡಾರವೇ ಖಾಲಿಯಾಗಿದೆ. ಅವರು ಮುತ್ಸದ್ದಿಯೇ ಅಲ್ಲ, ಖಾಲಿ ಕೊಡದ ಲೊಲ್ಲಲೋಟ್ಟೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್ ಪ್ರಮುಖರಾದ ದೀರರಾಜ್ ಹೊನ್ನವಿಲೆ, ಪ್ರಮುಖರಾದ ಜಿ.ಪದ್ಮನಾಭ್, ಶಿ.ಜು.ಪಾಶ ಇದ್ದರು.

Exit mobile version