Site icon TUNGATARANGA

ಶಿವಮೊಗ್ಗ: ವಿದ್ಯುತ್ ಇಲಾಖೆ ಕ್ರಿಕೇಟ್ ಪಂದ್ಯಾವಳಿ – ಮೈಸೂರು ಪ್ರಥಮ, ಉಡುಪಿ ದ್ವಿತೀಯ, ಗುಂಡ್ಲುಪೇಟೆ ತೃತೀಯ/ ಪೋಟೋ ಸುದ್ದಿ ಝಲಕ್ ನೋಡಿ


ಜಾಗೃತೆಯ ಕಾರ್ಯಕ್ಕೆ ಮಾನಸಿಕ ಸ್ಥಿಮಿತತೆ ಕಾಯ್ದುಕೊಳ್ಳಿ: ಎಸ್ ಇ ಶಶಿಧರ್


ಶಿವಮೊಗ್ಗ, ಡಿ.11:
ರಾಜ್ಯದ ವಿದ್ಯುತ್ ಇಲಾಖೆಯ ನೌಕರವರ್ಗದವರಿಗೆ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರ್ ಬ್ಲೂ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆದಿದ್ದರೆ ಉಡುಪಿಯ ಸ್ಟೈಕರ್ಸ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ಗುಂಡ್ಲುಪೇಟೆಯ ಟೈಗರ್ಸ್ ತಂಡ ತೃತೀಯ ಸ್ಥಾನ ಪಡೆದಿದೆ.


ಪವರ್ ಮ್ಯಾನ್ ಗಳು ಆಕಸ್ಮಿಕವಾಗಿ ಕರ್ತವ್ಯ ನಿರತರಾಗಿರುವಾಗ ಸಾವು ಕಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನೀಡುವ ಜೊತೆ ಅವರ ಸ್ಮರಣಾರ್ಥ ಬಲರಾಮ್ ಅಭಿಮಾನಿಗಳ ಸಂಘ, ಈರಪ್ಪ ಗ್ರಾಮೀಣಾಭಿವೃದ್ಧಿ ಎಜುಕೇಶನ್ ಟ್ರಸ್ಟ್ , ತುಂಗಾ ತರಂಗ ದಿನಪತ್ರಿಕೆ, ರಾಜೀವ್ ಗಾಂಧಿ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಎಸ್ಕಾಂ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ 24 ತಂಡಗಳು ಭಾಗವಹಿಸಿದ್ದು ವಿಜೇತ ತಂಡಗಳಿಗೆ ವಿದ್ಯುತ್ ಇಲಾಖೆಯ ಅಧಿಕ್ಷಕ ಅಭಿಯಂತರ ಎಸ್.ಜಿ. ಶಶಿಧರ್ ಅವರು ನಗದು ಹಾಗೂ ಟ್ರೋಫಿ ಬಹುಮಾನವನ್ನು ವಿತರಿಸಿದರು.


ಶಿವಮೊಗ್ಗ, ಜಗಳೂರು, ಸಾವನೂರು, ಗುಂಡ್ಲುಪೇಟೆ, ಪಾವಗಡ, ತಿಪಟೂರು, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಮೈಸೂರು, ಉಡುಪಿ, ಹಳಿಯಾಳ್, ಕುಂಸಿ, ಭದ್ರಾವತಿ, ಬಾಗೇಪಲ್ಲಿ ಸೇರಿದಂತೆ 24 ತಂಡಗಳು ಭಾಗವಹಿಸಿದ್ದು 4 ವಿಭಾಗಗಳಲ್ಲಿ ಲೀಗ್ ಪಂದ್ಯಾವಳಿ ನಡೆಯಿತು.
ಇದೇ ಮೊದಲ ಬಾರಿಗೆ ರಾಜ್ಯದ ಬಹುತೇಕ ಜಿಲ್ಲೆಗಳ ವಿದ್ಯುತ್ ಇಲಾಖೆಯ ಪಂದ್ಯಾವಳಿ ಇದಾಗಿದ್ದು, ಆಯೋಜಕರು ಸಕಲ ವ್ಯವಸ್ಥೆಗಳನ್ನು ಶಿವಮೊಗ್ಗದ ಜೆಎನ್ಎನ್‌ಸಿ ಕ್ರೀಡಾಂಗಣ ಹಾಗೂ ಕೃಷಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಮಾಡಲಾಗಿತ್ತು.


ಎರಡು ದಿನಗಳ ಕಾಲ ನಡೆದ ಪಂದ್ಯಾವಳಿ ರೋಚಕವಾಗಿದ್ದು, ಮೈಸೂರು ತಂಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅಧೀಕ್ಷಕ ಅಭಿಯಂತರ ಎಸ್. ಜಿ. ಶಶಿಧರ್ ಅವರು ಮಾತನಾಡುತ್ತಾ ನಮ್ಮ ಮನಸಿನ ಸ್ಥಿಮಿತತೆಯಿಂದ ಸಕಲವೂ ಸಾಧ್ಯ. ಕೆಲಸದ ಒತ್ತಡ ಎಂದುಕೊಂಡು ಇರುವ ಅವಧಿಯನ್ನು ಕಳೆದುಕೊಳ್ಳದಿರಿ. ನಿಮ್ಮ ನಿಮ್ಮ ದೈಹಿಕ ಹಾಗೂ ಮಾನಸಿಕ ಸಂತಸ ಹಾಗೂ ಉತ್ಸಾಹಕ್ಕಾಗಿ ದಿನದ ಒಂದಿಷ್ಟು ಸಮಯವನ್ನು ನಿಗದಿಪಡಿಸಿಕೊಳ್ಳಿ ಎಂದು ತಿಳಿಸಿದರು.

ಎಲ್ಲರಿಗೂ ಸಮಯ ಇದ್ದೇ ಇರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಕರ್ತವ್ಯ ನಿರ್ವಹಿಸುವಾಗ ಎಚ್ಚರ ಅತಿ ಮುಖ್ಯ. ಯಾವುದೇ ಗಡಿಬಿಡಿ ಹಾಗೂ ಗೊಂದಲಕ್ಕೆ ಒಳಗಾಗದೆ ಜನರ ಸೇವೆಗೆ ಕಂಕಣಬದ್ಧರಾಗಿರುವ ವಿದ್ಯುತ್ ಇಲಾಖೆಯ ನಾವುಗಳು ಸದಾ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಮಾಜ ಸೇವಕ ಹೊಳಲೂರು ಸಂತೋಷ್ ಮಾತನಾಡುತ್ತಾ ದೇಶದ ಸೈನಿಕರಂತೆ ವಿದ್ಯುತ್ ಇಲಾಖೆಯ ನೀವುಗಳು ಸಹ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಯಾವುದೇ ಕಾರಣಕ್ಕು ಜಾಗೃತೆ ಇಲ್ಲದೆ ಕೆಲಸ ನಿರ್ವಹಿಸದಿರಿ. ನಿಮ್ಮ ಸಾವಿನಿಂದ ಸಂಭವಿಸುವ ನಷ್ಟ ಹಾಗೂ ಕುಟುಂಬದ ವ್ಯವಸ್ಥೆಯನ್ನು ಗಂಭೀರವಾಗಿ ಗಮನಿಸಿ ಇತ್ತೀಚಿಗಷ್ಟೇ ನಡೆದ ಹಾಲಸ್ವಾಮಿ ಸೇರಿದಂತೆ ಹಲವರು ಕರ್ತವ್ಯ ನಿರ್ವಹಿಸುವಾಗ ಅಕಾಲಿಕವಾಗಿ ಸಂಭವಿಸಿದ ಸಾವು ಇಡೀ ಶಿವಮೊಗ್ಗ ಜಿಲ್ಲೆಯನ್ನು ದುಃಖತಪ್ತವಾಗಿಸಿತ್ತು. ಸೈನಿಕನಿಗೆ ಸಿಕ್ಕ ಗೌರವ ಅಲ್ಲಿ ವ್ಯಕ್ತವಾಗಿತ್ತು ಎಂದರು.


ಇಲಾಖೆ ಕೊಡ ಮಾಡುವ ರಕ್ಷಣಾತ್ಮಕ ಉಪಕರಣಗಳನ್ನು ಬಳಸಿಕೊಳ್ಳಿ. ಅಗತ್ಯವಿದ್ದರೆ ನಾನು ಸಹ ವೈಯಕ್ತಿಕವಾಗಿ ಅಂತಹ ಉಪಕರಣಗಳನ್ನು ಕೊಡಿಸುತ್ತೇನೆ ಎಂದು ಹೇಳಿದರು.
ಟ್ರಸ್ಟಿನ ಸಂಸ್ಥಾಪಕರಾದ ಎಚ್. ಬಿ. ಜಗದೀಶ್, ಅಧ್ಯಕ್ಷ ಸುರೇಶ್, ತುಂಗಾತರಂಗ ದಿನಪತ್ರಿಕೆ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ಇಲಾಖೆಯ ಅಧಿಕಾರಿಗಳಾದ ಅಶೋಕ್, ಲೋಕೇಶ್ ನಾಯ್ಕ್, ಜಗದೀಶ್ ಕುಂಸಿ, ಕಾರ್ಯಕ್ರಮದ ಆಯೋಜಕರಾದ ಹೆಚ್. ಬಿ. ಮಂಜುನಾಥ್ ಅವರೊಂದಿಗೆ ಶಿವಕುಮಾರ್, ಕೃಷ್ಣ, ನಂದೀಶ್, ಚೇತನ್, ರಾಜೀವ್, ಸುದೀರ್, ಸುರೇಶ್, ಶಿವಾನಂದ್, ರಾಜು, ಮಂಜುನಾಥ, ಕೀರ್ತಿ, ವಿನಯ್, ಕುಮಾರ್, ಅಜಯ್, ಸುನಿಲ್, ತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version