ಸಾಗರ : ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತು ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ನಡೆದ ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಶುಕ್ರವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಡಿ. ೪ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣ ಸಂದರ್ಭದಲ್ಲಿ ಈಗಾಗಲೇ ಮುಸ್ಲೀಂ ಸಮುದಾಯಕ್ಕೆ ನಾಲ್ಕು ಸಾವಿರ ಕೋಟಿ ರೂ. ಅನುದಾನ ನೀಡಿದ್ದು ಮುಂದಿನ ವರ್ಷ ಮುಸ್ಲೀಂ ಸಮಾಜಕ್ಕೆ ೧೦ಸಾವಿರ ಕೋಟಿ ರೂ. ಅನುದಾನ ಖಂಡಿತವಾಗಿಯೂ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಂವಿಧಾನ
ವಿರೋಧಿಯಾಗಿದ್ದು ಮುಸ್ಲೀಂರಿಗೆ ಪ್ರತ್ಯೇಕ ಅನುದಾನ ಕೊಡಲು ಅವಕಾಶ ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಆರ್ಟಿಕಲ್ – ೩೦ರ ಪ್ರಕಾರ ಮುಸ್ಲೀಂರಿಗೆ ವಿಶೇಷ ಅನುದಾನಕ್ಕೆ ಅವಕಾಶ ಇರುವುದಿಲ್ಲ. ಅಲ್ಪಸಂಖ್ಯಾತರಲ್ಲಿ ಆರು ಧರ್ಮೀಯರಿದ್ದು ಅವರನ್ನೆಲ್ಲಾ ಸಮಾನವಾಗಿ ನೋಡಬೇಕಾದ ಕರ್ತವ್ಯ ಮುಖ್ಯಮಂತ್ರಿಗಳದ್ದಾಗಿದೆ. ಮುಸ್ಲೀಂ ಒಂದು ಸಮುದಾಯಕ್ಕೆ ಮಾತ್ರ ಅನುದಾನ ಹೆಚ್ಚು ಕೊಡುತ್ತೇವೆ ಎಂದು ನೀಡಿರುವ ಹೇಳಿಕೆ ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಸಂವಿಧಾನಕ್ಕೆ ವಿರುದ್ದವಾಗಿ ರಾಜ್ಯದ ಖಜಾನೆಯನ್ನು ಆಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಎಂಬ ಮುಸ್ಲೀಂ ಮೌಲಿಗೆ ಶಂಕಿತ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇದೆ ಎನ್ನುವ ಚರ್ಚೆ ನಡೆಯುತ್ತಿದೆ. ವಿಧಾನಸಭಾ ಸದಸ್ಯರಾದ ಬಸವನಗೌಡ ಯತ್ನಾಳ್ ಕೆಲವು ದಾಖಲೆ ಸಹಿತ ತನ್ವೀರ ಪೀರಾ ಅವರ ಚಟುವಟಿಕೆ ತಿಳಿಸಿದ್ದಾರೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ಕೆ.ವಿ.ಪ್ರವೀಣ್, ಮಂಜುಗೌಡ, ದೀಪು ಗೌಡ, ಮುರಳಿ, ಅಜಿತ್ ಇನ್ನಿತರರು ಹಾಜರಿದ್ದರು.