Site icon TUNGATARANGA

ಕೋವಿಡ್ ಎದುರಿಸಲು ಮನೋಸ್ಥೈರ್ಯ ಅಗತ್ಯ: ಪ್ರೊ.ಬಿ.ಪಿ.ವೀರಭದ್ರಪ್ಪ

ಎಟಿಎನ್‌ಸಿಸಿ ಕಾಲೇಜಿನಲ್ಲಿ ಕೋವಿಡ್ ಕುರಿತು ಕಾರ್ಯಾಗಾರ



ಶಿವಮೊಗ್ಗ: ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಜೀವ ಭಯ ಹುಟ್ಟಿಸಿದೆ. ಅದರಲ್ಲೂ ಹಿರಿಯ ನಾಗರೀಕರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಆಕಸ್ಮಿಕವಾಗಿ ಕೋವಿಡ್ ಬಂದರೂ ಸಹ ಮನೋಸ್ಥೈರ್ಯ ಕಳೆದು ಕೊಳ್ಳಬಾರದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.
ಎಟಿಎನ್‌ಸಿಸಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ೧,೨ ಮತ್ತು ೩ ಹಾಗೂ ಐಕ್ಯೂಎಸಿ ಇವರ ಸಂಯುಕ್ತಾಶ್ರಯದಲ್ಲಿ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು. ಈ ಕಾರಣಕ್ಕಾಗಿಯೇ ಭಾರತದಲ್ಲಿ ಕೋವಿಡ್‌ನಿಂದಾಗಿ ಜೀವ ಬಲಿ ಕಡಿಮೆಯಾಗಿದೆ. ಅಲ್ಲದೆ ಸೂಕ್ತ ಸಮಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು ಸಹ ಫಲ ನೀಡಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯವು ಕೋವಿಡ್ ವಿರುದ್ಧ ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಕ್ರಮಕೈಗೊಂಡಿದೆ. ವಿದ್ಯಾರ್ಥಿಗಳಲ್ಲಿ ಕೋವಿಡ್ ಭಯ ಹೋಗಲಾಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ವಿದ್ಯಾರ್ಥಿಗಳ ಸಂಘಟನಾತ್ಮಕ ಶಕ್ತಿ ದೇಶದ ಬಹುದೊಡ್ಡ ಸಂಪತ್ತು, ಯುವ ಜನತೆ ದೇಶದ ಶಕ್ತಿ. ವಿದ್ಯಾರ್ಥಿಗಳ ಸಂಘಟನಾತ್ಮಕ ಶಕ್ತಿಯನ್ನು ಸಮಾಜಮುಖಿಯಾಗಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಸಮಾಜವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮನದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಎನ್‌ಎಸ್‌ಎಸ್ ವಿಶೇಷ ಪಾತ್ರ ವಹಿಸುತ್ತಿದ್ದು, ಪ್ರಾದೇಶಿಕ, ಸಾಂಸ್ಕೃತಿಕ ಐಕ್ಯತೆ ಜೊತೆಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತಿದೆ. ಸಮಾಜಕ್ಕಾಗಿ ಬದುಕುವ ಮನೋಭಾವವನ್ನು ಬೆಳೆಸುವ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳಸಲಿದೆ ಎಂದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್, ಎನ್‌ಇಎಸ್ ಉಪಾಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ, ಕಾರ್ಯದರ್ಶಿ ನಾಗರಾಜ್, ಪ್ರಾಂಶುಪಾಲ ಪ್ರೊ.ಹೆಚ್.ಎಂ. ಸುರೇಶ್, ರೆಡ್‌ಕ್ರಾಸ್ ಸಂಸ್ಥೆಯ ಡಾ.ವಿ.ಎಲ್.ಎಸ್. ಕುಮಾರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಪರಿಸರ ನಾಗರಾಜ್, ಪ್ರೊ.ಕೆ.ಎಂ. ನಾಗರಾಜ್, ಪ್ರೊ.ಎಸ್. ಜಗದೀಶ್, ಆರ್‌ಟಿಓ ಲಕ್ಷೀಕಾಂತ್ ನಾಲವಾರ ಉಪಸ್ಥಿತರಿದ್ದರು.

Exit mobile version