ಶಿವಮೊಗ್ಗ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಾರ್ಮಿಕರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಿಶು ವಿಹಾರದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಕನಿಷ್ಟ 5 ಸಾವಿರ ರೂ.ನಿಂದ 75 ಸಾವಿರ ರೂ.ವರೆಗೆ ಸಹಾಯಧನ ನೀಡಲಾಗುತ್ತಿತ್ತು.
ಆದರೆ, ನ. 30 ರಿಂದ ಈ ಸಹಾಯಧನ ಶುಲ್ಕವನ್ನು ಶೇ. 75ರಿಂದ 85 ರಷ್ಟು ಕಡಿತಗೊಳಿಸಲಾಗಿದೆ. ಈ ಹಿಂದೆ 5 ಸಾವಿರದಿಂದ 75 ಸಾವಿರ ರೂ.ವರೆಗೆ ಸಿಗುತ್ತಿದ್ದ ಸಹಾಯಧನ ಈಗ 1100 ರಿಂದ 12 ಸಾವಿರ ರೂ.ವರೆಗೆ ಮಾತ್ರ ನೀಡಲು ಆದೇಶ ಮಾಡಲಾಗಿದೆ. ಇದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸರ್ಕಾರ ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು. ಈ ಹಿಂದೆ ನೀಡುತ್ತಿದ್ದಂತೆಯೇ ಶೈಕ್ಷಣಿಕ ಸಹಾಯಧನ ಮುಂದುವರೆಸಬೇಕು. ಜೊತೆಗೆ ನೈಜ ಕಟ್ಟಡ ಕಾರ್ಮಿಕ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತಗೊಳಿಸಬೇಕು. ನ್ಯೂನತೆಗಳ ಸರಿಪಡಿಸಬೇಕು. ಅಧಿಕಾರಿಗಳು ಉಡಾಫೆಯಿಂದ ವರ್ತಿಸುವುದನ್ನು ನಿಲ್ಲಿಸಬೇಕು. ಸರ್ಕಾರ ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಫ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಹೆಚ್. ಸತೀಶ್, ರಾಘವೇಂದ್ರ, ಶಿವರಾಜ್, ಕೆ.ಎನ್. ಚನ್ನಬಸಪ್ಪ, ರಂಗಸ್ವಾಮಿ, ಕಲ್ಲೇಶ್, ಅಫ್ತರ್ ಭಾಷಾ, ಮಹೇಶ್, ಸುಬ್ರಮಣಿ, ಆನಂದ, ಮಾರಮ್ಮ, ರಂಗಸ್ವಾಮಿ, ಶಶಿ, ಹರೀಶ್ ಮೊದಲಾದವರಿದ್ದರು.