ಶಿವಮೊಗ್ಗ: ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ವಿಶೇಷ ಯೋಜನೆ ಶಿಶುಪಾಲನಾ ಕೇಂದ್ರವನ್ನು ಈಗಿನ ಸರ್ಕಾರ ರದ್ದು ಮಾಡಿರುವುದು ಕಾರ್ಮಿಕರಿಗೆ ಮಾಡಿದ ದ್ರೋಹವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಬಿಜೆಪಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಸರ್ಕಾರ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಬಹುಮುಖ್ಯವಾಗಿ ರಾಜ್ಯಗಳಲ್ಲಿ ಸುಮಾರು 137 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಿತ್ತು ಆ ಮೂಲಕ ಆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡ ಮಾಡುತ್ತಿತ್ತು. ಇದೊಂದು ಕಲ್ಯಾಣ ಕಾರ್ಯಕ್ರಮವಾಗಿತ್ತು. ಆದರೆ ರಾಜ್ಯಸರ್ಕಾರ ಈ ಯೋಜನೆಯನ್ನು ಏಕಾಏಕಿ ನಿಲ್ಲಿಸಿದೆ ಇದರಿಂದ ಕಾರ್ಮಿಕರ ಮಕ್ಕಳಿಗೆ ತೊಂದರೆಯಾಗಿದೆ ಎಂದರು.
ಶೈಕ್ಷಣಿಕ ವರ್ಷ ಇನ್ನೂ 5 ತಿಂಗಳು ಇರುವಾಗಲೇ ಮಧ್ಯದಲ್ಲಿಯೇ ಈ ರೀತಿ ಕೇಂದ್ರಗಳನ್ನು ರದ್ದುಮಾಡಿದರೆ ಆ ಮಕ್ಕಳು ಎಲ್ಲಿಗೆ ಹೋಗಬೇಕು ಮಧ್ಯಾಹ್ನದ ಊಟದ ಗತಿಯೇನು ? ಪಾಠ ಮಾಡುವ ಶಿಕ್ಷಕರ ಗತಿಯೇನು? ಇದು ಮಕ್ಕಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು ಎಂದು ಪ್ರಶ್ನೆ ಮಾಡಿದರು.
ಬೋಗಸ್ ಕಾರ್ಡ್ಗಳು ಇವೇ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ರದ್ದು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಯಾರಿಗೆ ಈ ಶಿಕ್ಷೆ ಅಕ್ಷರಶಃ ಮಕ್ಕಳನ್ನು ಬೀದಿಗೆ ತಳ್ಳಲಾಗಿದೆ ಇದು ದ್ವೇಷದ ರಾಜಕಾರಣಯಾಗಿದೆ. ಕಾರ್ಮಿಕ ಇಲಾಖೆ ಸಚಿವರು ಈ ಬಗ್ಗೆ ಉಡಾಫೆ ಉತ್ತರ ಕೊಡುತ್ತಾರೆ. ಅಧಿಕಾರಿಗಳೇನು ಅನುಕಂಪ ಇದೆ. ಆದರೆ ಮಂತ್ರಿಗಳಿಗೆ ಏಕೆ ಇಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು. ರದ್ದು ಮಾಡಿರುವ ಈ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಾನು ಸದನದ ಗಮನ ತರುತ್ತೇನೆ. ಸ್ಟಾರ್ ಪ್ರಶ್ನೆಯ ಮೂಲಕ ಕೇಳಿದರೆ ಅವಕಾಶ ಸಿಗದೇ ಇರಬಹುದು ಎಂಬ ಕಾರಣಕ್ಕಾಗಿ ಗಮನ ಸೆಳೆಯುವ ಸೂಚನೆಯ ಪ್ರಶ್ನೆಯನ್ನು ಮಾಡುತ್ತೇನೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಂಡುತ್ತೇನೆ ಇದು ಬಹುಮುಖ್ಯ ವಿಷಯವಾಗಿದೆ ಎಂದರು.
ಒAದು ಕಡೆ ಶಿಶುಪಾಲನಾ ಕೇಂದ್ರಗಳನ್ನು ಮುಚುವ ಮಾತನಾಡುವ ಸರ್ಕಾರ ಮತ್ತೊಂದು ಕಡೆ ಪ್ರತಿ ಗ್ರಾಮಗಳಲ್ಲಿ ಸುಮಾರು 4000 ಕೇಂದ್ರಗಳನ್ನು ಸ್ಥಾಪಿಸುತ್ತೇನೆ ಎನ್ನುತ್ತಿದ್ದಾರೆ. ಕೇವಲ 137 ಕೇಂದ್ರಗಳಿಗೆ ಹಣ ನೀಡದ ಸರ್ಕಾರ ಈಗ ಇಷ್ಟೊಂದು ಕೇಂದ್ರಗಳನ್ನು ತೆರೆಯಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ. ಒಂದು ಯೋಜನೆಯನ್ನು ಮುಚ್ಚುವ ಸರ್ಕಾರ ಹೇಗೆ ಬಲಿಷ್ಟವಾಗುತ್ತದೆ ರಾಜ್ಯ ಸರ್ಕಾರ ಒಂದು ಭೀಕಾರಿ ಸರ್ಕಾರ ಎಂದು ಟೀಕಿಸಿದರು.
ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ಶೈಕ್ಷಣಿಕ ಧನವನ್ನು ಕೂಡ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ನರ್ಸರಿಯಿಂದ ಹಿಡಿದು ಬಿ.ಹೆಚ್.ಡಿ.ತನಕ ವ್ಯಾಸಂಗ ಮಾಡುವ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ಅದನ್ನು ಕಡಿಮೆಗೊಳಿಸಿದೆ ಮತ್ತು ಕೆಲವೊಂದು ರದ್ದು ಮಾಡಿದೆ ಇದು ನ್ಯಾಯವಲ್ಲ ಎಂದರು.
ಕಾರ್ಮಿಕ ಇಲಾಖೆ ಸಚಿವರ ಜೊತೆಗೂ ನಾನು ಮಾತನಾಡಿದ್ದೇನೆ, ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ತಕ್ಷಣವೇ ಈ ಯೋಜನೆಯನ್ನು ಜಾರಿಗೆ ತರಬೇಕು ಇಲ್ಲದಿದ್ದರೆ ಕಾರ್ಮಿಕರು ಹೋರಾಟಕ್ಕೂ ಸಿದ್ಧವಾಗುತ್ತಾರೆ. ಬಿಜೆಪಿ ಕೂಡ ಹೋರಾಟಕ್ಕೆ ಇಳಿಯದೇ ಅನ್ಯಾ ಮಾರ್ಗ ಇರುವುದಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜ್ಞಾನೇಶ್ವರ್, ಜಗದೀಶ್,ಬಾಲು, ಕೆ.ವಿ.ಅಣ್ಣಪ್ಪ ಇದ್ದರು.