ಶಿವಮೊಗ್ಗ : ನವೆಂಬರ್ ೩೦ .
ಶಿಕಾರಿಪುರ ತಾಲೂಕಿನ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಹಾಗೂ ಜಾನುವಾರುಗಳಿಗೆ ಉಂಟಾಗಬಹುದಾದ ಸಂಭಾವ್ಯ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ನಿನ್ನೆ ಸಂಜೆ ಶಿಕಾರಿಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು, ಬರಗಾಲ ಮತ್ತು ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು
. ತುರ್ತು ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಹಾಗೂ ಜನಸಾಮಾನ್ಯರಿಗೆ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು.
ತಾಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ಕುಡಿಯುವ ನೀರಿನ ಲಭ್ಯತೆಯಿದ್ದು, ಸದ್ಯ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ೧೪ನೇ ಹಣಕಾಸು ಯೋಜನೆಯಡಿಯಲ್ಲಿಯೂ ಅಗತ್ಯತೆಗಳಿಗೆ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ತಾಲೂಕಿನ ಸುಮಾರು ೧೧,೦೦೦ಹೆ.ಪ್ರದೇಶದಲ್ಲಿ ಬೆಳೆದ ಭತ್ತದಲ್ಲಿ ೪,೦೦೦ಹೆ. ಭತ್ತದ ಬೆಳೆ ಹಾನಿಗೊಳಗಾಗಿದ್ದು, ರೂ. ೪೦.೦೦ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ೧೯,೦೦೦ಹೆ.ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದಲ್ಲಿ ೧೪,೦೦೦ಹೆ. ಮೆಕ್ಕೆಜೋಳ ಹಾನಿಗೊಳಗಾಗಿದ್ದು, ಸಮಾರು ೧೦೧ಕೋ. ರೂ. ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಈಗಾಗಲೇ ೪,೦೦ಕೋ.ರೂ.ಗಳ ಮಧ್ಯಂತರ ವಿಮೆ ವಿತರಿಸಲಾಗಿದೆ. ರೈತರಿಗೆ ಪ್ರಸಕ್ತ ಬೇಸಿಗೆಯಲ್ಲಿ ಭತ್ತ ಮತ್ತು ನೀರಾವರಿ ಹೊರತುಪಡಿಸಿ, ಸೇಂಗಾ, ಹೆಸರು, ಹುರಳಿ ಮುಂತಾದ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮನವಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಕಂಡುಬರುವುದಿಲ್ಲ. ಅಲ್ಲದೇ ಸಾಕಷ್ಟು ಪ್ರಮಾಣದ ಮೇವು ದಾಸ್ತಾನಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೈತರಿಗೆ ಮೇವಿನ ಬೀಜಗಳನ್ನು ವಿತರಿಸಲಾಗಿದೆ ಎಂದರು.
ತಾಲೂಕಿನ ಹಲವು ಕಡೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ದೋಷಗಳಿರುವ ಹಾಗೂ ಗುಣಮಟ್ಟದ ಕಾಮಗಾರಿಗಳು ನಡೆಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ.
ಈ ಕಾಮಗಾರಿಗಳ ಮೇಲುಸ್ತುವಾರಿ ವಹಿಸುವ ಅಭಿಯಂತರರು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆ ಸೂಚಿಸಿದ ಅವರು, ಕಳಪೆ ಕಾಮಗಾರಿಗಳನ್ನು ಒಪ್ಪಿಕೊಳ್ಳಲಾಗದು. ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಅವರು ಸೂಚಿಸಿದರು.
ದಂಡಾವತಿ ಯೋಜನೆಯ ವ್ಯಾಪ್ತಿಗೊಳಪಡುವ ಕೆರೆಗಳಿಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಸಕಾಲದಲ್ಲಿ ನೀರನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ಹನಿ ನೀರೂ ಕೂಡ ವ್ಯರ್ಥವಾಗದಂತೆ ಹಾಗೂ ಸದ್ಭಳಕೆಯಾಗುವಂತೆ ಗಮನಿಸಬೇಕೆಂದವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಇಲಾಖಾಧಿಕಾರಿಗಳು ವ್ಯವಸ್ಥಿತ ಕ್ರಮ ವಹಿಸಬೇಕು. ಅದಕ್ಕಾಗಿ ಸಂಬಂಧಿತ ಇಲಾಖಾ ಅಧಿಕಾರಿಗಳು ಮತ್ತು ಸರ್ಕಾರದ ನಡುವೆ ಸಮನ್ವಯತೆ ಅಗತ್ಯವಿದೆ. ಪ್ರಸ್ತುತ ಈಗಾಗಲೇ ಶರಾವತಿಯಿಂದ ಸೊರಬ, ಶಿರಾಳಕೊಪ್ಪ ಮತ್ತು ಆನವಟ್ಟಿ ಪಟ್ಟಣ ಪ್ರದೇಶಗಳ ನಿವಾಸಿಗಳಿಗೆ ಕುಡಿಯುವ ನೀರಿನ ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮುಂದಿನ ೨೫-೩೦ವರ್ಷಗಳ ದೂರದೃಷ್ಠಿಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮುಂದಿನ ೨-೩ತಿಂಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಕೈಗೊಳ್ಳಲಾಗುವುದು. ಈ ಯೋಜನೆಯಡಿ ೩೫೧ ಗ್ರಾಮಗಳು ಮತ್ತು ೦೩ಪಟ್ಟಣ ಪ್ರದೇಶಗಳು ಸೇರಿವೆ ಎಂದರು.
ಜಿಲ್ಲೆಯಲ್ಲಿ ಅರಣ್ಯದಲ್ಲಿ ಹಲವು ದಶಕಗಳಿಂದ ವಾಸವಾಗಿ ಬದುಕು ರೂಪಿಸಿಕೊಂಡಿರುವ ವನವಾಸಿಗಳನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ ಅವರು ಹೊಸದಾಗಿ ಅರಣ್ಯ ಒತ್ತುವರಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ವನವಾಸಿಗಳ ಅನುಕೂಲಕ್ಕಾಗಿ ಸರ್ಕಾರ ಸದ್ಯದಲ್ಲಿ ಜನಸ್ನೇಹಿ ನಿರ್ಣಯ ಕೈಗೊಳ್ಳಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಸೌಲಭ್ಯ ದೊರೆಯದಿರುವ ಫಲಾನುಭವಿಗಳು ಸೌಲಭ್ಯಕ್ಕಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸುವುದು. ಈವರೆಗೆ ಅರ್ಜಿ ಸಲ್ಲಿಸದಿರುವ ಫಲಾನುಭವಿಗಳು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಕು.ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ್, ನಾಗರಾಜ್, ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.