ಶಿವಮೊಗ್ಗ: ಜನವರಿ ೨೨ ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರತಿಷ್ಠಾಪನಾ ಸಮಾರಂಭದ ಅಂಗವಾಗಿ ಶಿವಮೊಗ್ಗದಲ್ಲಿ ಶ್ರೀರಾಮ ನಾಮ ಜಪ ಯಜ್ಞ ಸಮಿತಿ ವತಿಯಿಂದ ಶ್ರೀರಾಮ ಜಪ, ಧ್ಯಾನ ಭಜನೆ, ಆರಾಧನೆ ಹಾಗೂ ಶಾಲಾ, ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ನಟರಾಜ ಭಾಗವತ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೫ ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಜನ್ಮ ಸ್ಥಾನದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನ ಆದರ್ಶ ಎಲ್ಲರಿಗೂ ತಲುಪಲಿ ಎಂಬ ಹಂಬಲದಿಂದ ಶ್ರೀರಾಮನ ಪ್ರತಿಷ್ಠಾಪನಾ ಸಮಾರಂಭದವರೆಗೆ ನಿರಂತರವಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮಿತಿಯು ಸಮಾಜದ ಬಂಧುಗಳಲ್ಲಿ ಮನವಿ ಮಾಡುತ್ತದೆ. ಪ್ರತಿದಿನ ಕನಿಷ್ಠ ೧೦೮ ಬಾರಿ “ಶ್ರೀರಾಮ ಜಯ ರಾಮ ಜಯ ಜಯ ರಾಮ” ಎಂಬ ರಾಮತಾರಕ ಮಹಾಮಂತ್ರವನ್ನು ಜಪಿಸಬೇಕು. ಜನವರಿ ೨೨ರ ವರೆಗೆ ಜಪಿಸಬೇಕು. ಹಾಗೆಯೇ ಪ್ರತಿಯೊಬ್ಬರಿಗೂ ಒಂದು ಕರಪತ್ರ ನೀಡಲಾಗುವುದು. ಆ ಕರಪತ್ರದಲ್ಲಿ ವಿವರಗಳು ಇರುತ್ತವೆ. ಎಷ್ಟು ಬಾರಿ ಜಪ ಮಾಡಿದ್ದಾರೆ ಎಂದು ಸಂಖ್ಯೆ ನಮೂದಿಸಬೇಕು.
ಈ ಕರಪತ್ರಗಳು ಶಿವಮೊಗ್ಗದ ೩೦ಕ್ಕೂ ಹೆಚ್ಚು ದೇವಾಲಯಗಳಲ್ಲಿ ದೊರೆಯುತ್ತವೆ. ಸಮಾಜ ಬಾಂಧವರು ತಮಗೆ ಹತ್ತಿರವಿರುವ ದೇವಸ್ಥಾನಗಳನ್ನು ಸಂಪರ್ಕಿಸಿ ಕರಪತ್ರಗಳಲ್ಲಿ ತಾವು ಎಷ್ಟು ಬಾರಿ ಜಪ ಮಾಡಿದ್ದಾರೆ ಎಂದು ನಮೂದಿಸುವಂತೆ ಮನವಿ ಮಾಡಿದರು.
ಹಾಗೆಯೇ ಶಿವಮೊಗ್ಗದ ಶಾಲಾ, ಕಾಲೇಜುಗಳಲ್ಲಿ ಶ್ರೀರಾಮನ ಕುರಿತಂತೆ ರಸಪ್ರಶ್ನೆ, ಭಕ್ತಿ ಗೀತೆ ಸ್ಪರ್ಧೆ,
ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಜನಾ ಸ್ಪರ್ಧೆ ನಡೆಸಲಾಗುವುದು. ಒಟ್ಟಾರೆ ರಾಮ ರಾಜ್ಯದ ಕಲ್ಪನೆ ಹೊಂದಿರುವ ಭಾರತೀಯ ಸಂಸ್ಕೃತಿಯಲ್ಲಿ ಶ್ರೀರಾಮನನ್ನು ಜಪದ ಮೂಲಕ ಸ್ಮರಿಸುತ್ತಾ ರಾಮನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ತಾರಕ ಜಪ ಯಜ್ಞ ಸಮಿತಿ ಅಧ್ಯಕ್ಷ ಆರ್.ಕೆ. ಸಿದ್ಧರಾಮಣ್ಣ,
ಉಪಾಧ್ಯಕ್ಷ ವಾಸುದೇವ, ರಮೇಶ್ ಬಾಬು, ಕಾರ್ಯದರ್ಶಿಗಳಾದ ಎನ್.ಡಿ. ಸತೀಶ್, ಚಂದ್ರಶೇಖರ್, ಶಬರೀಶ್ ಕಣ್ಣನ್, ಆನಂದರಾವ್ ಜಾಧವ್, ಮಾರುತಿ, ಸುನಿತಾ, ಸಂಚಾಲಕ ಸುಬ್ರಹ್ಮಣ್ಯ ಭಟ್ ಮುಂತಾದವರಿದ್ದರು.