Site icon TUNGATARANGA

ಟೆಕ್ ಸಮ್ಮಿಟ್ ನಲ್ಲಿ ಗಮನಸೆಳೆದ ತಾರೆ ಜಮೀನ್ ಪರ್ ನ ಸಂಚಾರಿ ತಾರಾಲಯ : ಚಂದ್ರಯಾನ – 3 ಆಕರ್ಷಣೆಯ ಕೇಂದ್ರ ಬಿಂದು/ಆಕರ್ಷಣೆಯ ಕೇಂದ್ರವಾಗಿರುವ ಚಂದ್ರಯಾನ – 3  ಉಪಗ್ರಹ ಮತ್ತು ರೋವರ್

–       ಉಪಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಂದ ಚಾಲನೆ

ಬೆಂಗಳೂರು, ನ, 29; ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಸಂಚಾರಿ ವ್ಯವಸ್ಥೆ ಮೂಲಕ ಶಾಲೆಯ ಬಾಗಿಲಿಗೆ ತಾರಾಲಯ ಕೊಂಡೊಯ್ಯುತ್ತಿರುವ ತಾರೆ ಜಮೀನ್ ಪರ್ ಸಂಸ್ಥೆಯು ಆಯೋಜಿಸಿರುವ ಚಂದ್ರಯಾನ – 3 ಪೆವಿಲಿಯನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ನಲ್ಲಿ ಇದು ತಂತ್ರಜ್ಞರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇದಕ್ಕಾಗಿ ಜಿಯೋಡೆಸಿಕ್ ಡೋಮ್ ಪ್ಲಾನಿಟೋರಿಯಮ್ ಅಳವಡಿಸಲಾಗಿದ್ದು ವಿಆರ್ ತಂತ್ರಜ್ಞಾನದ ಮೂಲಕ ಚಂದ್ರಯಾನದ ಅಭೂತಪೂರ್ವ ಅನುಭೂತಿಯನ್ನು ಇದು ನೀಡುತ್ತಿದೆ.

ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ,ಬಿಟಿ ಹಾಗೂ ಗ್ರಾಮೀಣಾಭಿವೃದ್ದಿ ಸಚಿವರಾದ ಪ್ರಿಯಾಂಕ ಖರ್ಗೆ ಈ ಪೆವಿಲಿಯನ್ ಗೆ ಚಾಲನೆ ನೀಡಿ ಸಂತಸ ವ್ಯಕ್ತಪಡಿಸಿದರು. 

ಚಂದ್ರಯಾನ – 3  ಉಪಗ್ರಹ ಮತ್ತು ರೋವರ್ ಪ್ರಮುಖ ಆಕರ್ಷಣೆಯ ಸಂಗತಿಯಾಗಿದೆ.

ತಾರೆ ಜಮೀನ್ ಪರ್ ಸಂಸ್ಥೆಯ ಸಂಸ್ಥಾಪಕ ದಿನೇಶ್ ಬಾದಗಂಡಿ ನೇತೃತ್ವದಲ್ಲಿ ಚಂದ್ರಯಾನ – 3 ಮಾದರಿ ಅಳವಡಿಸಿದ್ದು, ಇಸ್ರೋದ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ ಅತೀವ ಆಸಕ್ತಿ ವ್ಯಕ್ತವಾಗಿದೆ. ದಿನೇಶ್ ಬಾದಗಂಡಿ ಮೂಲತಃ ಗ್ರಾಮೀಣ

ಪ್ರದೇಶದವರಾಗಿದ್ದು, ಅವರು ಪ್ರಿಸ್ಟೀಜಿಯಸ್ ಎಲೆವೇಟ್ – 100  ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರದ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗಾಗಿ ತಾರೆ ಜಮೀನ್ ಪರ್ ಸಂಚಾರಿ ಪ್ರಯೋಗಾಲಯದ ಪರಿಕಲ್ಪನೆಯನ್ನು ರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಬಾದಗಂಡಿ, ರಾಜ್ಯದ ಮೂಲೆ ಮೂಲೆಗಳಲ್ಲಿ ತಾರಾಲಯ ಸಂಚರಿಸಿ 21 ಲಕ್ಷ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಸಾಂಪ್ರಾಯಿಕ ವಿಧಾನಗಳನ್ನು ಮೀರಿ ಈ ಸಂಸ್ಥೆಯು “ಮೇಕ್ ಇನ್ ಕರ್ನಾಟಕ” ನೀತಿಗೆ ಸಾಕ್ಷಿಯಾಗಿದ್ದು, ಇದಕ್ಕೆ ಅನುಗುಣವಾಗಿ ಅರೆ ಶಾಶ್ವತ ಜಿಯೋಡೆಸೆಕ್ ಗುಮ್ಮಟವನ್ನು ಅನಾವರಣಗೊಳಿಸಿದೆ. ಇದರಿಂದ ತಾರಾಲಯದ ವೆಚ್ಚ ಶೇ 50 ರಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ಸಾಂಪ್ರದಾಯಿಕ ತಾರಾಲಯಗಳು ಸಂವಾತ್ಮಕ ಕಲಿಕೆಗೆ ಪೂರಕವಾಗಿಲ್ಲ. ಆದರೆ ಇದು ಸಂವಾದಾತ್ಮಕ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಜಾಯ್ ಸ್ಟಿಕ್ ಮತ್ತು ಕೀಬೋರ್ಡ್ ಬಳಕೆಯ ಮೂಲಕ ಬಳಕೆದಾರರು ಆಕಾಶಕಾಯಗಳನ್ನು ನಿರ್ವಹಿಸಬಹುದು ಮತ್ತು ಅನ್ವೇಷಿಸಬಹುದು. ಚಂದ್ರಯಾನವನ್ನು ಮುನ್ನಡೆಸುವುದು, ಬಾಹ್ಯಾಕಾಶದಲ್ಲಿ ನ್ಯಾವಿಗೇಟ್ ಮಾಡುವುದು ಅಥವಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡುವುದು, ಡಿಜಿಟಲ್ ತಾರಾಲಯವು ಸಾಟಿಯಿಲ್ಲದ ಆಳವಾದ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದು ತಾರೆ ಜಮೀನ್ ಪರ್ ನ ಸಾಧನೆ ಮಾತ್ರವಲ್ಲ, ನಾವೀನ್ಯತೆ ಮತ್ತು ಶಿಕ್ಷಣದ ಶಕ್ತಿಯನ್ನು ಪ್ರದರ್ಶಿಸುವ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

Exit mobile version