Site icon TUNGATARANGA

ಶಿವಮೊಗ್ಗ/ ಏಳು ವರುಷದ ಬಾಲಕಿಗೆ ಲೈಂಗಿಕ ಕಿರುಕುಳ/ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 2 ಲಕ್ಷ ದಂಡ


ಶಿವಮೊಗ್ಗ, ನ.30:
ಏಳು ವರುಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ವಿರುದ್ದ ದಾಖಲಾಗಿದ್ದ ಪೋಕ್ಸೋ ಕಾಯ್ದೆ ದೂರಿನನ್ವಯ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ.-|| (ಪೋಕ್ಸೋ) ನ್ಯಾಯಾಲಯವು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಿದೆ.


ಘಟನೆಯ ವಿವರ:
2021ನೇ ಸಾಲಿನಲ್ಲಿ ದಾವಣಗೆರೆ ನ್ಯಾಮತಿಯ ವಾಸಿ 34 ವರ್ಷದ ವ್ಯಕ್ತಿಯೊಬ್ಬನು, 09 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆಂದು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿ ರವಿ ಎನ್ ಎಸ್, ಸಿಪಿಐ ವಿನೋಬನಗರ ವೃತ್ತರವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.


ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ.-|| (ಪೋಕ್ಸೋ) ವು )The Addl District and Sessions Court, FTSC–II (POCSO) Shivamogga ) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ದಿನಾಂಕ: 29-11-2023 ರಂದು ಆರೋಪಿತನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2,00,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು ಹಾಗೂ ನೊಂದ ಬಾಲಕಿಗೆ ಪರಿಹಾರವಾಗಿ 3,00,000/- ರೂಗಳನ್ನು ನೀಡಲು ಆದೇಶ ನೀಡಿರುತ್ತಾರೆ.

Exit mobile version