Site icon TUNGATARANGA

ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಸಹಕಾರಿ : ನ್ಯಾಯಾಧೀಶ .ಮಂಜುನಾಥ ನಾಯಕ್‌

ಶಿವಮೊಗ್ಗ, ನ.೨೯:
ದಿನನಿತ್ಯ ಕೆಲಸದ ಒತ್ತಡದಲ್ಲಿಯೇ ದಿನಕಳೆಯುವ ಪೊಲೀಸ್ ಅಧಿಕಾರಿ-ಸಿಬ್ಬಂಧಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಹಕಾರಿ ಯಾಗಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯ್ಕ್ ಅವರು ಹೇಳಿದರು.


ಅವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕವು ನಗರದ ಪೊಲೀಸ್ ಕವಾಯತು ಮೈದಾನ ದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಬಲೂನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಮಾತ್ರವಲ್ಲದೆ ವ್ಯಕ್ತಿ ದಿನವಿಡೀ ಸದಾ ಲವಲವಿಕೆಯಿಂದಿರಲು, ಉಲ್ಲಸಿತನಾಗಿರುವಲ್ಲಿ ಸಹಕಾರಿಯಾಗಲಿದೆ. ಇದರಿಂದ ವೃತ್ತಿಜೀವನ ಸಂತಸದಾಯಕವಾಗಿರಲಿದೆ ಎಂದವರು ನುಡಿದರು.


ಸೋಲು ಸಾಮಾನ್ಯ ಸಂಗತಿ. ಪ್ರತಿ ಹಂತದಲ್ಲೂ ಗೆಲುವನ್ನೇ ನಿರೀಕ್ಷಿಸುವುದು ಸಾಧ್ಯವಿಲ್ಲ. ಅನೇಕ ಸಂದರ್ಭಗಳಲ್ಲಿ ಸೋಲುಗಳು ವ್ಯಾವಹಾರಿಕ ಬದುಕಿನಲ್ಲಿ ಗೆಲ್ಲುವುದನ್ನು, ಸವಾಲುಗಳಿಗೆ ಮುಖಾಮುಖಿಯಾಗುವುದನ್ನು ತಿಳಿಸುತ್ತವೆ. ಸೋಲು ಮುಂದಿನ ಗೆಲುವಿಗೆ ಮುನ್ನುಡಿಯಾಗುತ್ತವೆ ಎಂದರು.


ಕ್ರೀಡೆಯು ವ್ಯಕ್ತಿಗೆ ಉಲ್ಲಾಸದಾಯಕ ವಾತಾವರಣ ನಿರ್ಮಿಸಲು ಸಹಕಾರಿಯಾಗಿರುವಂತೆಯೇ ತನ್ನಲ್ಲಿ ಸುಪ್ತ ವಾಗಿರುವ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಲಿ ದೆ. ಆದ್ದರಿಂದ ಪ್ರತಿಯೊಬ್ಬರೂ ಸದಾ ಲವಲವಿಕೆಯಿಂ ದಿರಲು, ಕಾರ್ಯಕ್ಷೇತ್ರದಲ್ಲಿ ಉತ್ಸುಕರಾಗಿರಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.


ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಕ್ರೀಡಾಳುಗಳು ಉಪಸ್ಥಿತರಿದ್ದರು.

Exit mobile version