Site icon TUNGATARANGA

ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ : ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಇಡೀ ದೇಶದಲ್ಲಿ ಮೋದಿ ವಿರುದ್ಧದ ಎಲ್ಲಾ ಶಕ್ತಿಗಳು ಒಟ್ಟಾಗಿ ಮೂರನೇ ಬಾರಿ ಪ್ರಧಾನಿಯಾಗದಂತೆ ತಡೆಯಲು ಸಂಚು ಮಾಡುತ್ತಿವೆ. ಆದರೆ ನಮ್ಮ ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮೋದಿಯೇ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಹಿನ್ನಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅತ್ಯಂತ ಕ್ಲಿಷ್ಟಕರವಾದ ಆರ್ಟಿಕಲ್ 370 ರದ್ದತಿ, ರಾಮ ಮಂದಿರ ನಿರ್ಮಾಣ ಸೇರಿದಂತೆ ದೇಶದ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನೀಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ 20 ಕ್ಕೂ ಹೆಚ್ಚು ಕರಕುಶಲ ವೃತ್ತಿ ನಿರತರಿಗೆ ಸ್ವಾವಲಂಬಿಗಳಾಗಲು ಯೋಜನೆ ರೂಪಿಸಿದ್ದಾರೆ. ಕರ್ನಾಟಕದಿಂದ ಆರೂವರೆ ಲಕ್ಷ ಜನ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗದಿಂದ ಕೇವಲ 2 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನು ಒಂದು ವಾರ ಸಮಯವಿದೆ. ನಿರುದ್ಯೋಗಿಗಳು ಇದರ ಸಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ದೇಶದಲ್ಲಿ ಇದುವರೆಗೆ ಆಗದಷ್ಟು ಹೆದ್ದಾರಿ ಅಭಿವೃದ್ಧಿ, ವಿಮಾನ ನಿಲ್ದಾಣಗಳು. ರೈಲ್ವೇ, ಸೇತುವೆಗಳು ನಿರ್ಮಾಣಗೊಂಡಿವೆ. ಮತ್ತೊಮ್ಮೆ ಮೋದಿ ಬರಲು ರಾಜ್ಯದಿಂದ ವಿಜಯೇಂದ್ರ ಸಾರಥ್ಯದಲ್ಲಿ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿಯೂ ರಾಜ್ಯದ ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ, ಸಾಗರ ಕ್ಷೇತ್ರಗಳಲ್ಲಿ ಆಕಸ್ಮಿಕ ಸೋಲು ಕಂಡಿದ್ದೇವೆ. ಆದರೆ, ಮತಗಳು ಹೆಚ್ಚಿಗೆ ಲಭ್ಯವಾಗಿವೆ. ಭದ್ರಾವತಿಯಲ್ಲಿ ನಮ್ಮ ಶಕ್ತಿ ವೃದ್ಧಿಸಿಕೊಂಡಿದ್ದೇವೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿಯೂ ಗೆಲುವಿನ ಬಗ್ಗೆ ಸಂಶಯವಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಎ.ಕೆ. ಸುಬ್ಬಯ್ಯ ಮೊದಲ ಅಧ್ಯಕ್ಷರಾಗಿ ಪಾರ್ಟಿ ಕಟ್ಟಿದರು.  ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಒಂದು ಸೀಟಿನಿಂದ ಖಾತೆ ಆರಂಭಿಸಿ ಬಿಜೆಪಿಗೆ ಅಧಿಕಾರಕ್ಕೆ ತರುವವರಗೆ ಅವಿರತವಾಗಿ ಶ್ರಮಿಸಿದರು. ಈಗ ಅವರ ಮಗ ವಿಜಯೇಂದ್ರ ಚುಕ್ಕಾಣಿ ಹಿಡಿದಿದ್ದಾರೆ. ಅವರು ಗೆಲುವಿನ ನಾಗಾಲೋಟವನ್ನು ಮುಂದುವರೆಸಲಿದ್ದಾರೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗದಿಂದ ಜೀತದಾಳುಗಳ ಮುಕ್ತಿ ಹೋರಾಟಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿ, ಮೊದಲ ಬಾರಿಗೆ ಶಿವಮೊಗ್ಗದಿಂದ ಬೆಂಗಳೂರು ಚಲೋ ಪಾದಯಾತ್ರೆ ನಡೆಸಿದ್ದರು. ಎಲ್.ಕೆ. ಅಡ್ವಾಣಿ ಅವರು ಇದನ್ನು ಉದ್ಘಾಟಿಸಿದ್ದರು. ರಾಮ ಮಂದಿರ ಯಾತ್ರೆ ಬಂದಾಗಲೂ ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಸೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಲ್ಲದೇ, ಪಕ್ಷ ಬೆಳೆಯುತ್ತಾ ಸಾಗಿತು. ಅಧಿಕಾರ ಹಿಡಿಯಿತು. ಈಗ ಕಾಕತಾಳೀಯ ಎನ್ನುವಂತೆ ನಾವೆಲ್ಲರೂ ಕನಸು ಕಂಡಿದ್ದ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ವಿಜಯೇಂದ್ರ ಅವರು ಅಧ್ಯಕ್ಷರಾದಾಗಲೇ ಅದರ ಉದ್ಘಾಟನೆ ಆಗುತ್ತಿದೆ. ಮೋದಿ ಮತ್ತೆ ಪ್ರಧಾನಿಯಾಗಲು ಎಲ್ಲಾ ಕಾರ್ಯಕರ್ತರು ಪರಿಶ್ರಮ ಪಟ್ಟು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಿಸಲಿದ್ದೇವೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಎದ್ದು ನಿಲ್ಲು ವೀರ ದೇಶ ಕರೆದಿದೆ. ಪಡೆಯ ಕಟ್ಟು ಧೀರ ಸಮಯ ಬಂದಿದೆ ಎನ್ನುವಂತೆ ಬಿಎಸ್. ಯಡಿಯೂರಪ್ಪ ಹಾಕಿಕೊಟ್ಟ ಬುನಾದಿಯಲ್ಲಿ ಇನ್ನೂ ಗಟ್ಟಿಯಾದ ಕೋಟೆ ಕಟ್ಟಲು ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಬೇಕಿದೆ. ನಮ್ಮೆಲ್ಲರ ಸಹಕಾರ ಇದೆ ಎಂದರು.

ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಮಾತನಾಡಿ, ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು ಎನ್ನುವುದು ಸಾಬೀತಾಗಿದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಬಿಜೆಪಿ ಮಹಿಳಾ ನಾಯಕಿ ಭಾರತಿ ಶೆಟ್ಟಿ ಮಾತನಾಡಿ, ವೇದಿಕೆಯಲ್ಲಿ ಮೂವರು ರಾಜ್ಯಾಧ್ಯಕ್ಷರು ಕುಳಿತಿದ್ದಾರೆ. ಎಲ್ಲಾ ನಾಯಕರು ಒಗ್ಗಟ್ಟಾಗಿ ವಿಜಯೇಂದ್ರ ಅವರನ್ನು ಆಶೀರ್ವದಿಸಿದ್ದು, ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಬದುಕು ತೆರೆದ ಪುಸ್ತಕವಾಗಿದ್ದು, ಕಾರ್ಯಕರ್ತರಿಗೆ ಸ್ಪೂರ್ತಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬಿ.ವೈ. ವಿಜಯೇಂದ್ರ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್. ರುದ್ರೇಗೌಡ, ಆರಗ ಜ್ಞಾನೇಂದ್ರ, ಡಿ.ಎಸ್. ಅರುಣ್, ಬಿ.ಜಿ. ಪಾಟೀಲ್, ಪಕ್ಷದ ಪ್ರಮುಖರಾದ ಹರತಾಳು ಹಾಲಪ್ಪ, ಗಿರೀಶ್ ಪಟೇಲ್, ಸ್ವಾಮಿರಾವ್, ಆರ್.ಎಂ. ಹೆಗ್ಗಡೆ, ಮೋನಪ್ಪ ಭಂಡಾರಿ, ಗಣೇಶ ರಾಯರು, ಎಸ್. ದತ್ತಾತ್ರಿ, ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಇದ್ದರು.

Exit mobile version