ಸಾಗರ : ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಾಲೆಯಿಂದ ಒಬ್ಬ ವಿದ್ಯಾರ್ಥಿಯೂ ಹೊರಗೆ ಉಳಿಯದಂತೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ತಾಲ್ಲೂಕಿನ ಮಂಕಳಲೆ ಗ್ರಾಮದಲ್ಲಿ ಶನಿವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ರಂಗಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೆ ಶಿಕ್ಷಣ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಮಗ ಶಾಲೆಯಿಂದ ಹೊರಗೆ ಉಳಿದಿದ್ದರೆ ಅಂತಹವರ ವಿವರ ಕೊಡಿ. ನಾನೇ ಖುದ್ದಾಗಿ ಅವರ ಮನೆಗೆ ಹೋಗಿ ಮಗುವಿಗೆ ಬೇಕಾದ ಸವಲತ್ತುಗಳನ್ನು ನೀಡಿ ಪುನಃ ಶಾಲೆಗೆ ಬರುವಂತೆ ಮನವೊಲಿಸುತ್ತೇನೆ ಎಂದು ಸೂಚನೆ ನೀಡಿದ್ದೇನೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಅದು ಸದ್ವಿನಿಯೋಗವಾಗಬೇಕು. ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಮಾತ್ರ ಗುಣಮಟ್ಟದ ಶಿಕ್ಷಕರು ಇರುತ್ತಾರೆ. ಗುಣಮಟ್ಟದ ಶಿಕ್ಷಕರು ಇರುವುದರಿಂದಲೇ ಖಾಸಗಿ ಶಾಲೆಗಿಂತ ಉತ್ತಮವಾಗಿ ಸರ್ಕಾರಿ ಶಾಲೆಗಳು ಶೇ. ೧೦೦ ಫಲಿತಾಂಶ ತರುತ್ತಿವೆ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಇರುವ ಅನುಮಾನ ಮೊದಲು ದೂರವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಹ ಪರಿಣಿತಿ ನೀಡುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ. ಸರ್ಕಾರಿ ಶಾಲೆಯೊಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಶಾಲೆಯಿಂದ ಜ್ಞಾನದ ಬೆಳಕು ಪಡೆದವರು ಶಾಲೆಯ ಅಭಿವೃದ್ದಿಗೆ ತಮ್ಮದೆ ಕೊಡುಗೆ ನೀಡಬೇಕು ಎಂದರು.
ವೇದಿಕೆಯಲ್ಲಿ ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ ಪ್ರವೀಣ, ಉಪಾಧ್ಯಕ್ಷ ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್, ಡಾ. ಅನ್ನಪೂರ್ಣ, ಪ್ರಮುಖರಾದ ಗಿರೀಶ್ ಹೆಗಡೆ, ಬಾಗಿ ಸತ್ಯನಾರಾಯಣ, ಕೆ.ಜಗನ್ನಾಥ್, ಕೆ.ಜಿ.ಶಿವಾನಂದ್, ಜಯಂತಿ ಇನ್ನಿತರರು ಹಾಜರಿದ್ದರು. ನಾಗರತ್ನ ಪ್ರಾರ್ಥಿಸಿದರು. ರಾಘವೇಂದ್ರ ಎನ್.ಜಿ. ಸ್ವಾಗತಿಸಿದರು. ಈಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ರವಿ ಎಂ. ವಂದಿಸಿದರು. ವಿಷ್ಣುಮೂರ್ತಿ ನಿರೂಪಿಸಿದರು.