ಶಿವಮೊಗ್ಗ : ನವೆಂಬರ್ ೨೪ :ಕಿವುಡ, ಮೂಕ, ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುವ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಿವುಡ, ಮೂಕ, ಬುದ್ದಿಮಾಂದ್ಯ ಮಕ್ಕಳ ಸ್ಥಿತಿಗತಿಗಳು, ಅವರ ಜೀವನ ಶೈಲಿಯನ್ನು ಗಮನಿಸಿದಾಗ ಕರಳು ಕಿವುಚಿದಂತಾಗುತ್ತದೆ. ಅವರ ಬದುಕು ಸಾಮಾನ್ಯರಂತಿಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದ ಅವರು, ಪೋಷಕರು ಇಂತಹ ಮಕ್ಕಳ ದಿನಚರಿಯನ್ನು ಕಣ್ಣೆದುರು ನೋಡಿ ಸಹಿಸಿಕೊಳ್ಳುವುದು ಕೂಡ ಮಾನಸಿಕವಾಗಿ ಅತ್ಯಂತ ನೋವನ್ನು ತಂದುಕೊಡಲಿದೆ. ಆದ್ದರಿಂದ ಇಂತಹ ಮಕ್ಕಳ ಶಿಕ್ಷಣ ಮತ್ತು ಸರ್ವಾಂಗೀಣ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಸರ್ಕಾರ ಹೆಚ್ಚಿನ ನೆರವನ್ನು ನೀಡಿ ಪ್ರೋತ್ಸಾಹಿಸಬೇಕು ಎಂದವರು ನುಡಿದರು.
ಪ್ಯಾರಾ ಓಲಂಪಿಕ್ಸ್‌ನಲ್ಲಿ ವಿಕಲಚೇತನ ಮಕ್ಕಳ ಸಾಧನೆ ಮಾದರಿಯಾಗಿದೆ. ಏಷಿಯನ್ ಗೇಮ್ಸ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಬಾಲಕಿಯ ಸಾಧನೆ ರಾಷ್ಟ್ರಕ್ಕೆ ಮಾದರಿಯಾಗಿರುವುದು ಜಿಲ್ಲೆಯ ಜನತೆಗೆ ಹರ್ಷದ ಸಂಗತಿಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಇಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದವರು ನುಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಕಲಚೇತನರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹ ನೀಡಬೇಕು. ಅಲ್ಲದೇ ಅವರಿಗೆ ಭವಿಷ್ಯದ ದಿನಗಳಲ್ಲಿ ಸ್ವಾಭಿಮಾನದ ಹಾಗೂ ನೆಮ್ಮದಿಯ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಗೌರವಿಸುವಂತಾಗಬೇಕೆಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ,
ವಿಕಲಚೇತನರಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡಬೇಕು. ಅವುಗಳನ್ನು ಕಿತ್ತುಕೊಳ್ಳುವಂತಾಗಬಾರದು. ಅವರ ನೆಮ್ಮದಿಯ ಜೀವನಕ್ಕೆ ಅಗತ್ಯ ನೆರವು, ನೊಂದ ಮನಸ್ಸುಗಳಿಗೆ ಭರವಸೆ, ಸಾಂತ್ವನ-ಶಕ್ತಿ ತುಂಬುವಂತಹ ಕೆಲಸ-ಕಾರ್ಯಗಳು ಸರ್ಕಾರ ಮತ್ತು ಸಾರ್ವಜನಿಕರಿಂದಾಗಬೇಕು ಎಂದವರು ನುಡಿದರು.
ದೈಹಿಕವಾಗಿ ಕೃಷವಾಗಿದ್ದರೂ ವಿಕಲಚೇತನ ಮಕ್ಕಳಲ್ಲೂ ಎಲ್ಲ ರೀತಿಯ ಬುದ್ದಿಮತ್ಯೆ, ಶಕ್ತಿ-ಸಾiರ್ಥ್ಯಗಳಿವೆ. ಅದರ ಅನಾವರಣಕ್ಕೆ ಅವಕಾಶಗಳನ್ನು ಒದಗಿಸುವ ಕಾರ್ಯ ಆಗಬೇಕಾಗಿದೆ. ಅವರಲ್ಲಿನ ಅಂತಃಶಕ್ತಿ ಜಾಗೃತಿಗೊಳಿಸಲು ಪ್ರೇರಣಾದಾಯಕ ಕೆಲಸಗಳು ಆಗಬೇಕಾದ ಅಗತ್ಯವಿದೆ ಎಂದರು.
ಇಂತಹ ಮಕ್ಕಳು ಮಾನಸಿಕವಾಗಿ ಕುಬ್ಜರಾಗದಂತೆ ಅವರು, ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ಇಂತಹ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಅಲ್ಲದೇ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಗಳು ಆಗಬೇಕು ಎಂದವರು ನುಡಿದರು.
ಕು. ಕೀರ್ತಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಮಾಜಿ ಸದಸ್ಯ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಹಾಗೂ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಪ್ರಾಧ್ಯಾಪಕ ಮಂಜುನಾಥ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ಕಿವುಡ, ಮೂಕ ಮತ್ತು ವಿಕಲಚೇತನ ಮಕ್ಕಳು, ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.