Site icon TUNGATARANGA

ಶಿವಮೊಗ್ಗ ವಿಮಾನ ಹಾರಟ ಶುರು | ಇಲ್ಲಿನ ಸುತ್ತ ಮುತ್ತ ಸ್ಥಳೀಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದೇಕೆ ?

ಶಿವಮೊಗ್ಗ: ಶಿವಮೊಗ್ಗದಿಂದ ಅಂತಾರಾಜ್ಯಕ್ಕೆ ವಿಮಾನ ಹಾರಾಟ ಆರಂಭವಾದ ಒಂದು ದಿನ ಕಳೆಯುವುದರ ಒಳಗಾಗಿಯೇ ವಿಮಾನ ನಿಲ್ದಾಣದ ಸುತ್ತಮುತ್ತಲ ಸ್ಥಳೀಯರು ಏಕಾಏಕಿ ಪ್ರತಿಭಟನೆ ನಡೆಸಿದ್ದಾರೆ.


ಇಂದು ಬೆಳಗ್ಗೆಯಿಂದ ಸ್ಥಳೀಯರು ಕಾರಾಗೃಹಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.


ಅಂತಾರಾಜ್ಯ ವಿಮಾನ ಹಾರಾಟ ಆರಂಭವಾದ ಬೆನ್ನಲ್ಲೇ ಶೀಘ್ರದಲ್ಲಿಯೇ ನೈಟ್ ಲ್ಯಾಂಡಿಂಗ್ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ ಒಳಗಾಗಿ ಇದು ಪೂರ್ಣವಾಗಲಿದೆ ಎಂದು ನಿನ್ನೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದರು.


ನೈಟ್ ಲ್ಯಾಂಡಿಂಗ್ ಮಾಡುವ ಕ್ರಮದ ಭಾಗವಾಗಿ ಓತಿಘಟ್ಟದ ಬಳಿಯ ಕಾರಾಗೃಹದ ರಸ್ತೆಯನ್ನು ಇಂದು ನಸುಕಿನಿಂದಲೇ ಮುಚ್ಚಲಾಗಿದೆ. ಈ ರಸ್ತೆ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಪಕ್ಕದಲ್ಲಿಯೇ ಹಾದುಹೋಗುತ್ತದೆ.


ನೈಟ್ ಲ್ಯಾಂಡಿಂಗ್ ಉದ್ದೇಶದಿಂದ ಈ ರಸ್ತೆಯನ್ನು ಮುಚ್ಚಿರುವ ಕಾರಣ ಈ ಭಾಗದ ಜನರಿಗೆ ಇದು ತೊಂದರೆಯಾಗಿ ಪರಿಣಮಿಸುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆಯನ್ನು ಬಂದ್ ಮಾಡಿದರೆ ಸಿದ್ಧನಗುಡಿ ಮತ್ತು ಸಿರಿಯೂರು ಗ್ರಾಮಕ್ಕೆ ೬ ಕಿಲೋ ಮೀಟರ್ ದೂರ ಕ್ರಮಿಸಬೇಕಾಗುತ್ತದೆ. ಅಲ್ಲದೇ ಇಲ್ಲಿ ಅರಣ್ಯ ಪ್ರದೇಶವಾಗಿರುವ ಕಾರಣ ರಾತ್ರಿ ವೇಳೆ ಸಂಚರಿಸುವುದು ದುಸ್ತರವಾಗುತ್ತದೆ. ಹೀಗಾಗಿ, ಈ ರಸ್ತೆಯನ್ನು ಮುಚ್ಚಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version