Site icon TUNGATARANGA

ಕುಡಿಯುವ ನೀರು ಮತ್ತು ಮೇವಿನ |ಕೊರತೆಯಾಗದಂತೆ ಕ್ರಮ ವಹಿಸಲು: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ


ಶಿವಮೊಗ್ಗ ನವೆಂಬರ್ 22
     ಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಭವವಿದ್ದು, ಎಲ್ಲಾ ತಾಲ್ಲೂಕು ತಹಶೀಲ್ದಾರ್‍ಗಳು ಹಾಗೂ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.


     ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬರ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಬರ ನಿರ್ವಹಣೆ ಸಂಬಂಧ ನವೆಂಬರ್ ಮಾಸಾಂತ್ಯದೊಳಗಾಗಿ ತಾಲ್ಲೂಕು ಟಾಸ್ಕ್‍ಪೋರ್ಸ್ ಸಭೆ ನಡೆಸುವಂತೆ ತಹಶೀಲ್ದಾರರಿಗೆ ಸೂಚಿಸಿದ ಅವರು ಜಾನುವಾರುಗಳ ಮೇವಿನ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.


   ಗ್ರಾ.ಪಂ ವಾರು ರೈತರ ಜಮೀನುಗಳನ್ನು ಗುರುತಿಸಿ ಫ್ರೂಟ್ಸ್(ಈಖUIಖಿS) ತಂತ್ರಾಂಶದಲ್ಲಿ ರೈತರ ಆಧಾರ್ ಲಿಂಕ್ ಮಾಡಬೇಕು. ತೋಟಗಾರಿಕೆ, ಕೃಷಿ, ನರೇಗಾ ಯೋಜನೆಗಳಿಗೆ ಸಂಬಂಧಿಸಿದಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಲಿಂಕ್ ಮಾಡಬೇಕು. ಈಗಾಗಲೇ ತಂತ್ರಾಂಶದಲ್ಲಿ ಜಮೀನನ್ನು ಗುರುತಿಸಿ ಲಿಂಕ್ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳ ಒಳಗೆ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ವತಿಯಿಂದ ಈ ಕೆಲಸವನ್ನು ಪೂರ್ಣಗೊಳಿಸಬೇಕೆಂದರು.


     ನರೇಗಾ ಅಡಿಯಲ್ಲಿ ತಾ.ಪಂ ಇಓ ಗಳು ಕಾರ್ಮಿಕರಿಗೆ ಕೆಲಸಗಳನ್ನು ನೀಡಬೇಕು. ಸಾಗರ ಮತ್ತು ಸೊರಬದಲ್ಲಿ ಬೇಡಿಕೆ ಹೆಚ್ಚಿದೆ. ಗುರುತಿಸಿ ಕೆಲಸಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು. ಹಾಗೂ ಮಳೆ ಬಂದು ಬಿದ್ದಿರುವ, ಹಾನಿಗೊಳಗಾದ ಮನೆಗಳ ಜಿಪಿಎಸ್ ಬಾಕಿ ಇರುವುದನ್ನು ಪಿಡಿಓ ಗಳು ಪರಿಶೀಲಿಸಿ  ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
     ಎಲ್ಲ ತಹಶೀಲ್ದಾರ್, ಇಓ ಗಳು ಪಿಡಿಓ ಗಳ ಜೊತೆಗೂಡಿ ಪ್ರತಿ 15 ದಿನಗಳಿಗೆ ಒಮ್ಮೆ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಎಂದು ಸೂಚಿಸಿದ ಅವರು ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.


 ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಮುಂದಿನ 23 ವಾರುಗಳಿಗೆ ಜಾನುವಾರುಗಳ ಮೇವಿಗೆ ಕೊರತೆ ಇಲ್ಲ. ಶಿಕಾರಿಪುರ ಸೊರಬದಲ್ಲಿ 16 ವಾರಗಳಿಗೆ ಸಾಕಾಗುವಷ್ಟು ಮೇವಿದೆ. 29 ಸಾವಿರ ಮೇವಿನ ಕಿಟ್‍ಗಳನ್ನು ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
     ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಗಳಾದ ಸತ್ಯನಾಯರಾಯಣ್ ಮತ್ತು ಪಲ್ಲವಿ ಸಾತೇನಹಳ್ಳಿ, ಡಿಯುಡಿಸಿ ಪಿಡಿ ಮನೋಹರ್, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ತಹಶೀಲ್ದಾರರು, ತಾ.ಪಂ ಇಓ ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Exit mobile version