ಶಿವಮೊಗ್ಗ,ನ.20:
ಅಂತೂ ಈ ವರುಷದ ಶಿವಮೊಗ್ಗ ಐತಿಹಾಸಿಕ ಹಿನ್ನೆಲೆಯ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ದಿನಾಂಕ ಈಗ ನಿಗಧಿಯಾಗಿದೆ.
ಬರುವ 2024ರ ಮಾರ್ಚ್ 12ರಿಂದ 16ರವರೆಗೆ ಐದು ದಿನಗಳ ಕಾಲ ಈ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ ಎಂದು ಮೂಲಗಳು ತಿಳಿಸಿವೆ.
ಕೋಟೆ ಶ್ರೀ ಮಾರಿಕಾಂಬಾ ಸಮಿತಿಯು ಇಂದು ಮದ್ಯಾಹ್ನ ಸಭೆ ನಡೆಸಿದ್ದು, ಸಮಿತಿ ಅಧ್ಯಕ್ಷ, ಮಾಜಿ ಪಾಲಿಕೆ ಮೇಯರ್ ಎಸ್.ಕೆ. ಮರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸೇರಿ ಮಾ. 12ರಿಂದ ಐದು ದಿನಗಳ ಕಾಲ ಶಿವಮೊಗ್ಗದಲ್ಲಿ ಮಾರಮ್ಮನ ಜಾತ್ರೆ ನಡೆಸಲು ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ಮಾ. 12ರಂದು ಗಾಂಧಿಬಜಾರಿನ ಶ್ರೀ ಕಾಳಿಕಾ ದೇವಳದಲ್ಲಿ (ತವರು ಮನೆ) ಅಮ್ಮನನ್ನು ಪ್ರತಿಷ್ಠಾಪಿಸಿ ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿಶೇಷ ಪೂಜೆಗಳು ಜರುಗಲಿವೆ. ಮರುದಿನ ಬೆಳಿಗ್ಗೆ ಕೋಟೆ ರಸ್ತೆಯ ಶ್ರೀಮಾರಿ ಗದ್ದುಗೆಯಲ್ಲಿ (ಗಂಡನ ಮನೆ) ಅಮ್ಮನವರನ್ನು ಪ್ರತಿಷ್ಟಾಪಿಸಲಾಗುತ್ತದೆ. ಮಾ. 16ರಂದು ರಾತ್ರಿ ಅಮ್ಮನನ್ನು ಉತ್ಸವದೊಂದಿಗೆ ವಿಸರ್ಜನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಮಾರ್ಚ್ ಹಬ್ಬಕ್ಕೆ ಸಿಹಿಮೊಗೆ ಸಜ್ಜಾಗುತ್ತಿದೆ.