Site icon TUNGATARANGA

ಡಿವಿಎಸ್ ಆಯೋಜಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ಇಂಧನ ರಹಿತ ಅಡುಗೆ ಮಾಡಿ ಗಮನ ಸೆಳೆದ ವಿದ್ಯಾರ್ಥಿಗಳು

ಶಿವಮೊಗ್ಗ: ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಧನ ರಹಿತ ಅಡುಗೆ ಸ್ಪರ್ಧೆ ಗಮನ ಸೆಳೆಯಿತು.

ತರಕಾರಿ, ಹಣ್ಣು, ಮಂಡಕ್ಕಿ, ಪಾನಿಪೂರಿ, ಸೊಪ್ಪು, ಬಿಸ್ಕಟ್ ಸೇರಿದಂತೆ ವೈವಿಧ್ಯ ಬಗೆಯ ಅಡುಗೆಗೆ ಬೇಕಾಗುವ ವಸ್ತುಗಳನ್ನು ವಿದ್ಯಾರ್ಥಿಗಳು ತಂದಿದ್ದರು. ಅತ್ಯಂತ ಉತ್ಸಾಹದಿಂದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಆಸಕ್ತಿ ಹೆಚ್ಚಿಸುವ, ಕ್ರೀಯಾತ್ಮಕ ಆಲೋಚನೆ ಬೆಳೆಸುವ ದೃಷ್ಠಿಯಿಂದ ಇಂತಹ ಸ್ಪರ್ಧೆಗಳು ಅತ್ಯಂತ ಉಪಯುಕ್ತ ಆಗಿರುತ್ತವೆ. ವಿದ್ಯಾರ್ಥಿಗಳು ಹೊಸ ಹೊಸ ರೀತಿಯ ಚಾಟ್ಸ್, ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಆಸಕ್ತಿ ವಹಿಸಿ ವಿದ್ಯಾರ್ಥಿಗಳ ತಂಡಗಳು ವಿಶೇಷ ವಿಭಿನ್ನವಾಗಿ ಅಡುಗೆ ಸಿದ್ಧಪಡಿಸಿದ್ದರು.

ಇಂಧನರಹಿತ ಅಡುಗೆ ಮಾಡುವುದು ಅತ್ಯಂತ ಸವಾಲಿನ ಕೆಲಸ. ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.

ವಿದ್ಯಾರ್ಥಿಗಳಿಗೆ 30ಕ್ಕೂ ಅಧಿಕ ನಿಮಿಷಗಳ ಕಾಲ ತಿಂಡಿ ತಿನಿಸು ತಯಾರಿಕೆಗೆ ಅವಕಾಶ ನೀಡಲಾಗಿತ್ತು. ನಂತರ ತೀರ್ಪುಗಾರರು ವಿದ್ಯಾರ್ಥಿಗಳ ಗುಂಪುಗಳು ತಯಾರಿಸಿದ್ದ ಅಡುಗೆ ರುಚಿ ಸವಿದು 8ನೇ, 9ನೇ ಹಾಗೂ 10ನೇ ತರಗತಿಯ ಪ್ರತಿ ವಿಭಾಗದಲ್ಲೂ ಐದು ತಂಡಗಳಿಗೆ ಬಹುಮಾನ ನೀಡಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ಆಡಳಿತ ಮಂಡಳಿಯ ಹರೀಶ್.ಎಸ್., ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Exit mobile version