Site icon TUNGATARANGA

ಶಿವಮೊಗ್ಗದಲ್ಲಿ ಮೈಸೂರು ರಂಗಾಯಣದ ‘ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನ


ಶಿವಮೊಗ್ಗ, ನ.17:
ಮೈಸೂರು ರಂಗಾಯಣವು ಒಂದು ರಂಗ ಪ್ರಯೋಗಶಾಲೆಯಾಗಿದ್ದು, ಕಳೆದ 34 ವರ್ಷಗಳಿಂದ ಅನೇಕ ವಿಶಿಷ್ಟ ರಂಗಪ್ರಯೋಗಗಳ ಮೂಲಕ ರಂಗಭೂಮಿಯ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ. ಪ್ರಸಕ್ತ ಸಾಲಿನಲ್ಲಿ ರಂಗಾಯಣ ಸಿದ್ಧಪಡಿಸಿರುವ ಎರಡು ಹೊಸ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ.

ಈ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ ದಿ: 18-11-2023 ರ ಶನಿವಾರ `ಮುಟ್ಟಿಸಿಕೊಂಡವನು’ ಮತ್ತು ದಿ:19-11-2023 ರ ಭಾನುವಾರದಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನ ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ:18-11-2023 ರಂದು ಪ್ರದರ್ಶಿಸುವ ‘ಮುಟ್ಟಿಸಿಕೊಂಡವನು’ ನಾಟಕ ಪಿ. ಲಂಕೇಶ್ ಅವರ ಕಥೆ ಆಧಾರಿತವಾಗಿದ್ದು, ರಂಗಾಯಣದ ಹಿರಿಯ ಕಲಾವಿದರಾದ ಶ್ರೀಮತಿ ನಂದಿನಿ, ಕೆ.ಆರ್., ಅವರು ನಿರ್ದೆಶಿಸಿದ್ದಾರೆ.

ಈ ನಾಟಕದಲ್ಲಿ ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾಗಿಯೇ ಇರುವ ಒಳ್ಳೆಯತನ ಮತ್ತು ಮುಗ್ಧತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲುಗುತ್ತವೆ ಎಂಬುದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ.


ದಿನಾಂಕ:19-11-2023 ರಂದು ಪ್ರದರ್ಶಿಸುವ ‘ಕಸಾಂದ್ರ ಮತ್ತು ಸತಿ’ ನಾಟಕ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ ಅವರು ನಿರ್ದೇಶನ ಮಾಡಿದ್ದಾರೆ. ಹೆಚ್‌.ಎಸ್. ಶಿವಪ್ರಕಾಶರು ಗ್ರೀಕ್ ಪುರಾಣ ಹಾಗೂ ಈಸ್ಕಿಲ್ಸ್ ನ ಆಗಮೆಮ್ಮೇನ್ ನಾಟಕಗಳನ್ನು ಆಧರಿಸಿ, ‘ಕಸಾಂದ್ರ ನಾಟಕವನ್ನು ಮತ್ತು ಶಿವಪುರಾಣಗಳು ಹಾಗೂ ದೇಸಿ ಜಾನಪದ ಪುರಾಣಗಳಲ್ಲಿ ಬರುವ ದಾಕ್ಷಾಯಣಿಯ ಕಥೆಯನ್ನು ಆಧರಿಸಿ ‘ಸತಿ’ ಎಂಬ ನಾಟಕವನ್ನೂ ಬರೆದಿದ್ದಾರೆ.

ಈ ಎರಡೂ ದುರಂತ ಕಥೆಗಳು ಮಾನವಕುಲದ ಆದಿಮ ರೂಪಕಗಳು, ಇದು ಮನುಕುಲದ ಇತಿಹಾಸದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸರ್ವಾಧಿಕಾರ ದರ್ಪ ದಮನ ಹಿಂಸೆಯ ಸ್ವರೂಪಗಳನ್ನು ಪುರಾಣದ ಚೌಕಟ್ಟಿನಲ್ಲಿ ನೋಡುವ ಪ್ರಯತ್ನವಾಗಿದೆ.


ಈ ಎರಡು ನಾಟಕಗಳು ಭಿನ್ನ ಭಿನ್ನ ರಂಗಪಯೋಗಗಳಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಆದ್ದರಿಂದ ತಾವು ದಯಮಾಡಿ ನಾಟಕಗಳ ಪ್ರದರ್ಶನಕ್ಕೆ ಹೆಚ್ಚಿನ ಪ್ರಚಾರ ನೀಡಿ, ಅಪಾರ ಸಂಖ್ಯೆಯಲ್ಲಿ ರಂಗಾಸಕ್ತರು ಬಂದು ಈ ರಂಗಪ್ರಯೋಗಗಳನ್ನು ವೀಕ್ಷಿಸುವಂತೆ ಮಾಡಿ, ನಾಟಕಗಳ ಪ್ರದರ್ಶನವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮೈಸೂರು ರಂಗಾಯಣದ ಉಪ ನಿರ್ದೇಶಕರು ಕೋರಿದ್ದಾರೆ.

Exit mobile version