ಕಾಂತರಾಜ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಸುಪ್ರೀಂ ಕೋರ್ಟ್ ಆದೇಶ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ಮತ್ತು ಹಕ್ಕೊತ್ತಾಯ ಮಂಡನೆಯನ್ನು ನ. ೨೦ ರ ಸೋಮವಾರ ೧೧ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ, ಹಿಂದುಳಿದ ಜನಜಾಗೃತಿ ವೇದಿಕೆ, ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾ ಗೃತಿ ವೇದಿಕೆಯ ಅಧ್ಯಕ್ಷ ತೀ. ನ. ಶ್ರೀನಿವಾಸ ಇಂದಿಲ್ಲಿ ಹೇಳಿದರು.
ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತ ನಾಡುತ್ತಾ, ಅಂದು ಮಧ್ಯಾಹ್ನ ೧ ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯಾದ್ಯಂತದಿಂದ ಹಿಂದುಳಿದ ಸಮಾಜದವರು ಇದರಲ್ಲಿ ಭಾಗವಹಿಸುವರು ಎಂದರು.
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ೨೦-೦೧-೨೦೧೪ ರಂದು ಹೆಚ್. ಕಾಂತರಾಜ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೊಂಡಿತು. ಹಿರಿಯ ವಕೀಲ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಸುಮಾರು ೫ ವರ್ಷಗಳ ಕಾಲ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ೫೫ ಮಾನದಂಡಗಳನ್ನು ಅಳವಡಿಸಿ ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ ಸಾಮಾಜಿಕ, ಆರ್ಥಿಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ವರದಿಯನ್ನು ೨೦೧೮ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆ ಯಿಂದಾಗಿ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾ ಗದೆ ಹಾಗೆಯೇ ಉಳಿಯಿತು. ಈ ವರದಿ ತಯಾರಿಸಲು ಸರ್ಕಾರಕ್ಕೆ ಸುಮಾರು ೧೫೮.೪೭ ಕೋಟಿ ರೂಗಳ ವೆಚ್ಚವಾಗಿದೆ ಎಂದರು.
ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಗಳಾಗಿ ಅಧಿಕಾರಕ್ಕೆ ಬಂದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯವರು ಕಾಂತರಾಜ ಆಯೋಗದ ವರದಿ ಬಗ್ಗೆ ಯಾವುದೇ ಚಕಾರವೆತ್ತದೆ ಜಾಣ ಮೌನ ಪ್ರದರ್ಶಿಸಿ ವರದಿ ಹಾಗೆಯೇ ಶೈತ್ಯಾಗಾರದಲ್ಲಿ ಉಳಿಯುವಂತೆ ಮಾಡಿದ್ದಾರೆ. ಹಿಂದುಳಿದ ಜಾತಿಗಳ ಓಟು ಪಡೆದು ಆ ಜಾತಿಗೆ ಮಹಾದ್ರೋಹ ಮತ್ತು ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಮುಖಂಡರಾದ ವಿ. ರಾಜು, ಪ್ರೊ. ರಾಚಪ್ಪ, ಜನಮೇಜಿರಾವ್, ಉಮಾಪತಿ, ಡಿ. ಆರ್ ಉಮೇಶ್, ಆರ್ ಟಿ ನಟರಾಜ್ ಮೊದಲಾದವರಿದ್ದರು.