Site icon TUNGATARANGA

ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ : ಮೇಯರ್ ಎಸ್.ಶಿವಕುಮಾರ್

ಶಿವಮೊಗ್ಗ: ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್ ಹೇಳಿದರು.

ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಿರ್ಮಿಸಿರುವ ಬೀದಿಬದಿ ವ್ಯಾಪಾರಿಗಳ ಮಾರಾಟ ವಲಯ ಮಹಿಳಾ ಬಜಾರ್‌ನಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿದ್ದ ಮಹಿಳಾ ಸ್ವೇದ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಸ್ಥಳೀಯವಾಗಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಮಹಿಳಾ ಬಜಾರ್ ಯೋಜನೆ ಅತ್ಯಂತ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಾಜಿ ಮೇಯರ್, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ ಮಾತನಾಡಿ, ವಾರ್ಡ್ನಲ್ಲಿ ಕನ್ಸರ್‌ವೆನ್ಸಿ ಅಭಿವೃದ್ಧಿಪಡಿಸಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ವಿಶೇಷವಾಗಿ ಮಹಿಳಾ ಬಜಾರ್ ಯೋಜನೆ ಸಿದ್ಧಪಡಿಸಲಾಗಿದೆ. ಮಹಿಳಾ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಒದಗಿಸಲು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು. ಪ್ರಸ್ತುತ ಪ್ರಾಯೋಗಿಕವಾಗಿ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ. ಬಿ. ವಿ. ಲಕ್ಷ್ಮಿದೇವಿ ಗೋಪಿನಾಥ್ ಮಾತನಾಡಿ, ನವೆಂಬರ್ 16 ರಿಂದ 20ರವರೆಗೆ ಮಹಿಳಾ ಸ್ವೇದ ಸಂತೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಿಳಾ ಉದ್ಯಮಿದಾರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಮಹಿಳೆಯರು ಸ್ವಾವಲಂಬಿತರಾಗಿ ಜೀವನ ರೂಪಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವ ಕೆಲಸವನ್ನು ಸ್ವೇದ ಸಂಸ್ಥೆ ಮಾಡುತ್ತಿದ್ದು, ಮಹಿಳಾ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಅಗತ್ಯ ಇರುವ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವ ಕಾರ್ಯ ಸ್ವೇದ ಮಾಡುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ವಿಶೇಷ ಯೋಜನೆ ಶ್ಲಾಘನೀಯ. ಮಾರಾಟಗಾರರಿಗೆ ವೇದಿಕೆ ಒದಗಿಸುವ ಪ್ರಯತ್ನದ ಜತೆಯಲ್ಲಿ ಉತ್ಪನ್ನ ತಯಾರಕರಿಗೂ ಮಳಿಗೆಗಳನ್ನು ನೀಡುವ ಕೆಲಸ ಆಗಬೇಕು. ಇದರಿಂದ ಹೊಸ ಉದ್ಯಮ ಆಕಾಂಕ್ಷಿಗಳಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ತಿಳಿಸಿದರು.

ನವೆಂಬರ್ 16ರಿಂದ 20ರವರೆಗೆ ಶಿವಮೊಗ್ಗ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಸ್ವೇದ ಸಂಸ್ಥೆ ಸಹಯೋಗದಲ್ಲಿ ಸ್ವೇದ ಸಂತೆ ನಡೆಯಲಿದೆ. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಸ್ವೇದ ಸಂಸ್ಥೆಯ ಶಿಲ್ಪಾ ಗೋಪಿನಾಥ್, ಕೆ.ವಿ.ಅಣ್ಣಪ್ಪ, ಜಗದೀಶ್, ಸವಿತಾ ಮಾಧವ್ ಮತ್ತಿತರರು ಉಪಸ್ಥಿತರಿದ್ದರು.

Exit mobile version