Site icon TUNGATARANGA

ಬಿಜೆಪಿಯ ರಾಜ್ಯಾಧ್ಯಕ್ಷರ ನೇಮಕ / ಅದರ ಕ್ರೆಡಿಟ್ಟು ಕಾಂಗ್ರೆಸ್ಸಿಗೆ :ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಶಿವಮೊಗ್ಗ: ನಾವು ಪದೇಪದೇ ಬಿಜೆಪಿಗೆ ತಿವಿದಿದ್ದರಿಂದ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ಅದರ ಕ್ರೆಡಿಟ್ಟು ಕಾಂಗ್ರೆಸ್ಸಿಗೆ ಸೇರುತ್ತದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಎಂದು ಪದೇ ಪದೇ ಹೇಳುತ್ತಿದ್ದೆವು. ಈಗ ರಾಜ್ಯಾಧ್ಯಕ್ಷರ ನೇಮಕದಲ್ಲಿ ಗಜಪ್ರಸವ ಆದಂತಾಗಿದೆ. ವಿಜಯೇಂದ್ರ ಅವರನ್ನು ನೇಮಕ ಮಾಡುವ ಮೂಲಕ ಅಪ್ರತ್ಯಕ್ಷವಾಗಿ ಯಡಿಯೂರಪ್ಪನವರೇ ಅಧ್ಯಕ್ಷರು ಎಂದು ಬಿಜೆಪಿ ವರಿಷ್ಠರು ಹೇಳಿದ ಹಾಗಿದೆ ಎಂದರು.


ವಯಸ್ಸಾದ ಕುದುರೆಯೊಂದು ಗಾಡಿ ಎಳೆಯಲು ಸಾಧ್ಯವಾಗದಿದ್ದಾಗ ಅದರ ಮುಂದೆ ಹುಲ್ಲನ್ನು ಕಟ್ಟಿ ಸಾಗಿಸುತ್ತಾರಂತೆ. ಅದೇ ರೀತಿ ಈಗ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಬಿಎಸ್‌ವೈ ನೆರಳಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲುವ ತಂತ್ರ ಇದರಲ್ಲಿ ಅಡಗಿದೆ ಎಂದರು.


ವರ್ಗಾವಣೆ ಎಂಬುದು ಸಾಮಾನ್ಯ ಪ್ರಕ್ರಿಯೆ. ಇದು ಸೇಡಿನ ಕ್ರಮ ಅಲ್ಲ. ಷಡಾಕ್ಷರಿ ಅವರು ದೀರ್ಘ ಕಾಲದಿಂದ ಶಿವಮೊಗ್ಗದಲ್ಲೇ ಇದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಆಗಾಗ ವರ್ಗಾವಣೆ ಮಾಡುತ್ತಿರುತ್ತದೆ. ಇದು ರಾಜ್ಯಾಧ್ಯಕ್ಷರ ವರ್ಗಾವಣೆ ಅಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ತನಿಖೆಗೆ ಅನುಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಾನೂನು ಮೊರೆಹೋಗುವುದು ಅವರ ಜವಾಬ್ದಾರಿ ಅಷ್ಟೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ನೌಕರರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಹಳೇ ಪಿಂಚಣಿ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ನೌಕರರು ಇದನ್ನು ತಿಳಿದುಕೊಳ್ಳಬೇಕು. ಸಲ್ಲದ ವಿಷಯಗಳಿಗೆ ಕಿವಿಗೊಡಬೇಡಿ. ಸರ್ಕಾರ ನಿಮ್ಮ ಜೊತೆ ಇದೆ ಎಂದರು.

Exit mobile version