Site icon TUNGATARANGA

ಸಿ.ಎಸ್. ಷಡಾಕ್ಷರಿ ಕರ್ತವ್ಯಕ್ಕೆ ಹಾಜರಾಗುವುದು ಬಿಟ್ಟು ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಹೆಚ್.ಎಸ್. ಸುಂದರೇಶ್

ಶಿವಮೊಗ್ಗ: ವರ್ಗಾವಣೆಗೊಂಡಿರುವ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕರ್ತವ್ಯಕ್ಕೆ ಹಾಜರಾಗುವುದು ಬಿಟು ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ನಿಯಮದ ಪ್ರಕಾರ ವರ್ಗಾವಣೆ ಸಹಜವಾಗಿದೆ.

ಇದನ್ನು ತಿಳಿಯದ ಷಡಾಕ್ಷರಿ ವಾತಾವರಣವನ್ನೇ ಕೆಡಿಸಲು ಹೊರಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವ ನೈತಿಕತೆ ಇವರಿಗೇನಿದೆ? ವರ್ಗಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಕೂಡಲೇ ಈ ರೀತಿಯ ರಾಜಕಾರಣ ನಿಲ್ಲಿಸಬೇಕು ಎಂದು ಎಚ್ಚರಿಸಿದರು.


ಷಡಾಕ್ಷರಿ ಅವರ ವಿರುದ್ಧ ಸಾಕಷ್ಟು ಆಪಾದನೆಗಳಿವೆ. ಅವರ ವಿರುದ್ಧ ತನಿಖೆ ನಡೆಸಬೇಕು. ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಇವೆ. ತನಿಖೆ ನಡೆಸಿದರೆ ಅವರಿಗೆ ಬಹಳ ಕಷ್ಟವಾಗುತ್ತದೆ. ಈಗಾಗಲೇ ಮಣ್ಣು ಲೂಟಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ದಂಡ ಹಾಕಲಾಗಿದೆ. ಸಂಸದರು ಕೂಡ ಯಾವುದೋ ಮುಲಾಜಿಗೆ ಒಳಗಾಗಿ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಇದನ್ನೆಲ್ಲ ಬಿಟ್ಟು ಗೌರವಯುತವಾಗಿ ಅವರು ವರ್ಗಾವಣೆ ಆದ ಕಡೆ ಹೋಗಬೇಕು ಎಂದು ಆಗ್ರಹಿಸಿದರು.


ರಾಜ್ಯ ಸರ್ಕಾರ ಬರಗಾಲಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿದೆ. ಸುಮಾರು ೩೪ ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ೧೭ಸಾವಿರ ಕೋಟಿ ನೀಡಬೇಕೆಂದು ಮನವಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಒಂದು ಪೈಸೆ ಕೂಡ ನೀಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಕೂಡ ರಾಜ್ಯ ಸರ್ಕಾರದ ವಿರುದ್ಧ ಗೂಬೆ ಕೂರಿಸುವುದನ್ನು ಬಿಟ್ಟು ಕೇಂದ್ರದಿಂದ ಹಣ ತರಲಿ ಎಂದರು.


ಬಿಜೆಪಿ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಟೆಂಡರ್ ಕೆರೆಯುವಲ್ಲಿ, ಕಾಮಗಾರಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರಗಳಾಗಿವೆ. ರಾಜ್ಯ ಸರ್ಕಾರ ಇದನ್ನು ಕೂಡ ತನಿಖೆ ಮಾಡಬೇಕು. ಬಿಜೆಪಿ ಈಗಾಗಲೇ ಒಡೆದ ಮನೆಯಂತಾಗಿದೆ. ಬಹಳಷ್ಟು ಬಿಜೆಪಿಗರು ಮುಂದಿನ ದಿನಗಳಲ್ಲಿ ಕಾಂಗ್ರೆಸ ಸೇರುತ್ತಾರೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಶಂಕರಘಟ್ಟ ರಮೇಶ್, ಸಿ.ಎಸ್. ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಇಕ್ಕೇರಿರಮೇಶ್, ಕಲಗೋಡು ರತ್ನಾಕರ್, ಚಂದನ್ ಸೇರಿದಂತೆ ಹಲವರಿದ್ದರು.

Exit mobile version