ಹೊಸನಗರ: ತಾಲ್ಲೂಕಿನ ಪುರಪ್ಪೇಮನೆ ಸಮೀಪದ ಶರಾವತಿ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳನ್ನು ಪೊಲೀಸ್ ಮತ್ತು ಗಣಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಹೊಸನಗರ ಸಿಪಿಐ ಗುರಣ್ಣ ಎಸ್. ಹೆಬ್ಬಾಳ್, ಪಿಎಸ್‌ಐ ಶಿವಾನಂದ ವೈ.ಕೆ, ಶಿವಮೊಗ್ಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರಿಯಾ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಗಂಗಪ್ಪ ಬಟೋಲಿ, ಸುನಿಲ್, ಶಿವಪುತ್ರ, ಅವಿನಾಶ ಇತರರು ಇದ್ದರು.
ಬಸ್ ಹರಿದು ಬೈಕ್ ಸವಾರ ಸಾವು
ಶಿವಮೊಗ್ಗ : ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಖಾಸಗಿ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿದ್ದಾರೆ. ಜಂಕ್ಷನ್ ಸಮೀಪದ ರಂಗನಾಥಪುರದ ಶಂಕರಪ್ಪ (೬೦) ಮೃತ ಬೈಕ್ ಸವಾರ. ಕಿರಾಣಿ ಅಂಗಡಿಗೆ ಸಾಮಗ್ರಿ ತರಲು ಲಕ್ಕವಳ್ಳಿಗೆ ಟಿವಿಎಸ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಂಕರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿಗೆ 80 ಸಾವಿರ ರೂ. ವಂಚನೆ
ಶಿವಮೊಗ್ಗ: ಎಸ್‌ಬಿಐನ ಹಿರಿಯ ವ್ಯವಸ್ಥಾಪಕರ ಸೋಗಿನಲ್ಲಿ ಕರೆ ಮಾಡಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ೮೦,೫೦೧ ರೂ. ದೋಚಲಾಗಿದೆ. ಶಿವಮೊಗ್ಗ ನಗರದಲ್ಲಿ ವಾಸವಾಗಿರುವ ನಿವೃತ್ತ ಉದ್ಯೋಗಿ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಎಸ್‌ಬಿಐನ ಸೀನಿಯರ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗೆ ೭೯ ಸಾವಿರ ರೂ. ವರ್ಗಾಯಿಸಲಾಗಿದೆ ಎಂದಿದ್ದ. ನಿವೃತ್ತ ಉದ್ಯೋಗಿ ಈ ಹಿಂದೆ ಎಸ್‌ಬಿಐ ಖಾತೆ ಹೊಂದಿದ್ದರು. ಹಾಗಾಗಿ ತಮ್ಮ ಬಳಿ ಎಸ್‌ಬಿಐ ಖಾತೆ ಇಲ್ಲ. ಕೆನರಾ ಬ್ಯಾಂಕ್ ಖಾತೆ ಹೊಂದಿದ್ದೇನೆ ಎಂದು ತಿಳಿಸಿದ್ದರು.
ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿರುವ ಹಣವನ್ನು ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆಂದು ನಂಬಿಸಿ, ಎನಿ ಡೆಸ್ಕ್ ಆಪ್ ಡೌನ್‌ಲೋಡ್ ಮಾಡಿಸಿ ಮೂರು ಬಾರಿ ಹಣ ಪಡೆದಿದ್ದಾನೆ. ವಂಚನೆ ಆಗಿರುವುದು ಗೊತ್ತಾಗುತ್ತಿದ್ದಂತೆ ನಿವೃತ್ತ ಉದ್ಯೋಗಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಮುದ್ದಿನಕೊಪ್ಪ ಕ್ರಾಸ್ ಬಳಿ ಕಾರು ಪಲ್ಟಿ ಮೂವರಿಗೆ ಗಾಯ
ಶಿವಮೊಗ್ಗ: ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯ ಮುದ್ದಿನಕೊಪ್ಪ ಕ್ರಾಸ್ ಬಳಿ ಕಾರು-ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದು ಕಾರು ಪಲ್ಟಿಯಾಗಿ ಮೂವರು ಗಾಯಗೊಂಡಿದ್ದಾರೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.