Site icon TUNGATARANGA

ಬರಗಾಲ ತಾಂಡವಾಡವಾಡುತ್ತಿದೆ ಜಿಲ್ಲೆಯಲ್ಲಿ ಕೋಟ್ಯಾಂತರ ಬೆಳೆ ನಷ್ಟ ಇದಕ್ಕೆ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ : ಸಂಸದ ಬಿ.ವೈ ರಾಘವೇಂದ್ರ ದೂರು

ಶಿವಮೊಗ್ಗ: ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದ್ದರೂ ರಾಜ್ಯ ಸರ್ಕಾರ ಪರಿಹಾರ ನೀಡುವ ಬಗ್ಗೆ ಗಮನಹರಿಸದೆ ಇತರೆ ವಿಷಯಗಳಲ್ಲಿ ಸಮಯ ಕಳೆಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ದೂರಿದರು.


ಅವರು ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ನೀಡದೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದರು.
ಜಿಲ್ಲೆಯ ೭ ತಾಲೂಕಿನಲ್ಲಿ ಒಟ್ಟು ೪೧೫೩೦ ಹೆಕ್ಟೇರ್ ಭತ್ತ ಒಣಗಿಹೋಗಿ ೧೯೨ಕೋಟಿ ರೂ. ಹಾಗೂ ೩೮,೨೪೦ ಹೆಕ್ಟೇರ್ ಮೆಕ್ಕೆಜೋಳ ನಾಶವಾಗಿ ೨೩೦ ಕೋಟಿ ರೂ.ನ ಬೆಳೆ ನಷ್ಟವಾಗಿದೆ. ಇದಕ್ಕೆ ಪರಿಹಾರವನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಬಿಡುಗಡೆಯಾದ ಹಣ ಕಡಿಮೆಯಾಗಿ ರೈತರಿಗೆ ಅನ್ಯಾಯ ಮಾಡಿದೆ ಎಂದರು.


ಈಗ ಸರ್ಕಾರ ರೈತರಿಗೆ ೭ಗಂಟೆ ತ್ರೀಫೇಸ್ ವಿದ್ಯುತ್ ನೀಡುವುದಾಗಿ ಪ್ರಕಟಿಸಿದೆ. ಇದೇ ೭ ಗಂಟೆ ಜೂನ್, ಜುಲೈ, ಆಗಸ್ಟ್‌ನಲ್ಲಿ ನೀಡಿದ್ದರೆ ಬೆಳೆಗಳು ಒಣಗುತ್ತಿರಲಿಲ್ಲ. ಈಗ ಒಣಗಿ ರೈತರಿಗೆ ಭಾರೀ ನಷ್ಟವಾಗಿದೆ ಎಂದರು.
ರಾಜ್ಯದಲ್ಲಿ ಕೇಂದ್ರದಿಂದ ತಂಡ ಬಂದು ಬರ ಅಧ್ಯಯನ ಮಾಡಿದ್ದು, ಈ ಅಧ್ಯಯನದ ವರದಿಯಂತೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಕಾನೂನು ಪ್ರಕಾರ ಬಿಡುಗಡೆ ಮಾಡಲಿದೆ. ಪರಿಹಾರವನ್ನು ನೀಡದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.


ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗೋಶಾಲೆಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮಳೆ ಇಲ್ಲದೆ ಒಣಗಿರುವ ರೈತರ ಬೆಳೆಯನ್ನು ಕೊನೇಪಕ್ಷ ಮೇವಿಗಾಗಿಯಾದರೂ ರೈತರಿಗೆ ಹಣ ನೀಡಿ ಖರೀದಿಸಬೇಕು. ಕೇಂದ್ರ ಸರ್ಕಾರದ ಬಗ್ಗೆ ಗೂಬೆ ಕೂರಿಸುವುದನ್ನು ಬಿಡಬೇಕು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ೨೦೦೬ರಿಂದ ೨೦೧೪ರ ವರೆಗೆ ರಾಜ್ಯಕ್ಕೆ ಕೇವಲ ೨೨೫೦ಕೋಟಿ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ೨೦೧೪ರಿಂದ ೨೨ರ ವರೆಗೆ ಒಟ್ಟು ೧೩,೫೦೦ಕೋಟಿ ರೂ. ರಾಜ್ಯಕ್ಕೆ ನೀಡಿದೆ ಎಂದ ಅವರು, ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮುಂದಿನ ಬೆಳೆ ಬೆಳೆಯುವ ಬಗ್ಗೆ ತಜ್ಞರಿಂದ ಮಾಹಿತಿ ನೀಡಬೇಕು ಎಂದರು.


ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರುವ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಬೀದಿಗಿಳಿದ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದ ಅವರು, ಹಾಗೆಯೇ ತೋಟಗಾರಿಕೆ ಬೆಳೆಗಳಿಗೆ ಕೂಡ ಹಾನಿಯಾಗಿದೆ. ಅಡಿಕೆ ಬೆಳೆಗಾರರು ತೊಂದರೆಯಲ್ಲಿದ್ದಾರೆ. ಈ ಬಗ್ಗೆಯೂ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಭಾನುಪ್ರಕಾಶ್, ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಬಿ.ಕೆ. ಶ್ರೀನಾಥ್, ವಿರೂಪಾಕ್ಷಪ್ಪ ಇನ್ನಿತರರಿದ್ದರು.

Exit mobile version