ರೈತರ ಸಾಲ ವಸೂಲಾತಿಗಾಗಿ ಕೆನರಾ ಬ್ಯಾಂಕ್ ನವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಕುವೆಂಪು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಶಿವಮೊಗ್ಗ ತಾಲೂಕು ಹೊಳೆಹಟ್ಟಿ ಗ್ರಾಮದ ಕುಪೇಂದ್ರಪ್ಪ ಎನ್ನುವವರು ಕೆನರಾ ಬ್ಯಾಂಕಿನಲ್ಲಿ ಬೆಳೆ ಸಾಲ ಸೇರಿದಂತೆ ೯.೫೨ ಲಕ್ಷ ರೂ. ಸಾಲ ಪಡೆದಿದ್ದರು ಇದರಲ್ಲಿ ೪.೫೦ ಲಕ್ಷ ಜಮಾ ಮಾಡಿದ್ದಾರೆ. ಉಳಿದ ಹಣ ಪಾವತಿಸಲು ಸಿದ್ಧರಾಗಿದ್ದಾರೆ. ಆದರೆ ಸಾಲಗಾರ ರೈತ ಕುಪೇಂದ್ರಪ್ಪ
ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಪತ್ನಿಗೂ ಕೂಡ ಅನಾರೋಗ್ಯವಿದೆ. ಮಕ್ಕಳ ಮದುವೆಗೆ ಜಮೀನು ಮಾರಿದ್ದಾರೆ. ಇಂತಹ ಸಂದರ್ಭದಲ್ಲಿ ಕೆನರಾ ಬ್ಯಾಂಕಿನವರು ಮನೆ ಮುಂದೆ ಬಂದು ನಿಮ್ಮ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ನೋಟೀಸ್ ಅಂಟಿಸಿದ್ದಾರೆ. ಇದರಿಂದ ರೈತ ಮತ್ತು ಮನೆಯವರು ಭಯಭೀತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು ಎಂದು ಯೋಚಿಸುತ್ತಿದ್ದಾರೆ ಎಂದು ರೈತ ಸಂಘದವರು ದೂರಿದರು.
ಈ ಬಗ್ಗೆ ಬ್ಯಾಂಕಿಗೆ ಹೋಗಿ ಪರಿಶೀಲಿಸಿದರೆ ೯.೫೨ಲಕ್ಷ ಅಸಲಿನಲ್ಲಿ ೪.೫೦ ಲಕ್ಷ ಕಟ್ಟಿದ್ದರೆ ೫.೦೨ ಲಕ್ಷ ಅಸಲು ಉಳಿದಿದೆ. ಈ ಹಣಕ್ಕೆ ೧ಕೋಟಿ೧ಲಕ್ಷ ಬಾಕಿ ಇದೆ ಎಂದು ಬ್ಯಾಂಕಿನವರು ತಿಳಿಸುತ್ತಾರೆ. ಇದೇನು ಮೀಟರ್ ಬಡ್ಡಿಯೇ. ಶೇ.ಎಷ್ಟು ಬಡ್ಡಿ ಹಾಕಬೇಕು. ಚಕ್ರಬಡ್ಡಿ ಹಾಕಲು ಬ್ಯಾಂಕಿನವರಿಗೆ ಅಧಿಕಾರ ಇದೆಯೇ ಎಂದು ದೂರಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಈಶಣ್ಣ ಅರಬಿಳಚಿ, ಎಸ್.ಶಿವಮೂರ್ತಿ, ಹಿಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಪಂಚಾಕ್ಷರಿ, ಸಿ. ಚಂದ್ರಪ್ಪ, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ ಸೇರಿದಂತೆ ಹಲವರು ಇದ್ದರು.