Site icon TUNGATARANGA

ಯುವಜನತೆಗೆ ಅವಕಾಶಗಳನ್ನು ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ : ಬೃಹತ್ ಉದ್ಯೋಗ ಮೇಳ ಉದ್ಘಾಟಣೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ



ಶಿವಮೊಗ್ಗ, ನವೆಂಬರ್ 08,
      ಯುವಜನತೆಗೆ ಅವಕಾಶಗಳನ್ನು ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದು ಇದರ ಸದುಪಯೋಗವನ್ನು ಉದ್ಯೋಗಾಂಕ್ಷಿಗಳು ಪಡೆದುಕೊಳ್ಳಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.


   ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ(ಕೆಎಸ್‍ಡಿಸಿ), ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.


     ವಿದ್ಯಾರ್ಥಿಗಳು ಕಷ್ಟುಪಟ್ಟು ಓದುತ್ತಾರೆ. ಆದರೆ ಓದು ಮುಗಿದ ಮೇಲೆ ಏನು ಕೆಲಸ ಮಾಡಬೇಕೆಂದು ತಿಳಿಯದೆ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗದೆ ಕಷ್ಟಪಡುತ್ತಾರೆ. ಆದ್ದರಿಂದ ಒಂದೇ ವೇದಿಕೆಯಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುವ ಇಂತಹ ಬೃಹತ್ ಉದ್ಯೋಗ ಮೇಳಗಳು ಯುವಜನತೆ ಕೆಲಸ ಪಡೆಯಲು ಸಹಕಾರಿಯಾಗಿವೆ.
    ಇಂದು 82 ಕಂಪೆನಿಗಳು ವಿವಿಧ ರೀತಿಯ ಹುದ್ದೆಗಳದನ್ನು ನೀಡಲು ಮುಂದೆ ಬಂದಿದ್ದು ಸುಮಾರು 12 ಸಾವಿರ ಉದ್ಯೋಗ ನೀಡುವ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಇದರ ಉಪಯೋಗ ಪಡೆಯಬೇಕು. ನಮ್ಮ ಭಾಗದ ಮಕ್ಕಳು ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಉತ್ತಮ ಅವಕಾಶಗಳು ಇಂದು ಸಿಗಬೇಕು.


     ಸರ್ಕಾರ ಉದ್ಯೊಗ ಸೃಷ್ಟಿ ಮತ್ತು ಅವಕಾಶಗಳನ್ನು ನೀಡುವುದು ಎರಡಕ್ಕೂ ಮಹತ್ವ ನೀಡುತ್ತಿದ್ದು, ಕೈತುಂಬ ಕೆಲಸ ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಆಶಿಸಿದರು.
     ಓದು ಮುಗಿಸಿ, ತಕ್ಷಣ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಯುವನಿಧಿ ಯೋಜನೆಯನ್ನು ಬರುವ ಜನವರಿಯಿಂದ ಜಾರಿಗೆ ತರಲಾಗುವುದು. ಡಿಪ್ಲೊಮಾ ಮುಗಿಸಿದವರಿಗೆ ರೂ.1500 ಹಾಗೂ ಪದವಿ ಮುಗಿಸಿದವರಿಗೆ ರೂ.3000 ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.


     ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶಕ ನಾಗೇಂದ್ರ ಎಫ್ ಹೊನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೌಶಲ್ಯ ಅಭಿವೃದ್ದಿ ಪಡಿಸುವ ಸಲುವಾಗಿ ರಾಜ್ಯದಲ್ಲಿ 275 ಐಟಿಐ ಗಳು, ಜಿಟಿಟಿಸಿ, ಡಿಪ್ಲೊಮಾ, ಪಾಲಿಟೆಕ್ನಿಕ್ ಕಾಲೇಜುಗಳು ಇವೆ. ಕೌಶಲ್ಯವಿದ್ದರೆ ಸ್ವಂತ ಉದ್ಯೋಗ ಸಹ ಮಾಡಬಹುದು. ಇಂದಿನ ಉದ್ಯೋಗ ಮೇಳದಲ್ಲಿ ಸುಮಾರು 82 ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು 10 ಸಾವಿರ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಸರ್ಕಾರ ಹೊಸ ತಂತ್ರಜ್ಞಾನ ಹೊಂದಿರುವ ಉನ್ನತ ಮಟ್ಟದ ತರಬೇತಿಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.


     ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, 40 ಲಕ್ಷಕ್ಕೂ ಹೆಚ್ಚು ಜನರು ಎಂಜಿನಿಯರಿಂಗ್ ಕೋರ್ಸ್ ಮುಗಿಸಿ ಮುಂದೇನು ಮಾಡಬೇಕೆಂಬ ಯೋಚನೆ ಮಾಡಬೇಕಾದ ಸ್ಥಿತಿ ನಮ್ಮಲ್ಲಿದೆ. ಹಿಂದೆಲ್ಲ ಇಂಜಿನಿಯರಿಂಗ್ ಮತ್ತು ಡಾಕ್ಟರ್ ಕೋರ್ಸ್‍ಗೆ ಮಾತ್ರ ಹೆಚ್ಚಿನ ಮಾನ್ಯತೆ ಇತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯಲ್ಲಿ ಕೌಶಲ್ಯವನ್ನು ಅಭಿವೃದ್ದಿ ಪಡಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅನೇಕ ಅವಕಾಶಗಳು ತೆರೆಯಲ್ಪಟ್ಟಿವೆ. ರಾಜ್ಯ ಸರ್ಕಾರದಿಂದ ಯಶಸ್ವಿ ಉದ್ಯೋಗ ಮೇಳಗಳು ಜರುಗುತ್ತಿವೆ.
     ಕುವೆಂಪು ವಿಶ್ವವಿದ್ಯಾಲಯದಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಾರೆ. ಶಿವಮೊಗ್ಗದಲ್ಲಿಯೇ ಇವರಿಗೆ ಉದ್ಯೋಗ ನೀಡುವಂತಹ, ಸೇವಾ ನಿಲುವುಳ್ಳ ಕಂಪನೆಗಳು ಬರಬೇಕು ಎಂದು ಆಶಿಸಿದರು.
      ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಜನತೆ ಸ್ವಾವಲಂಬಿ ಬದುಕು ನಡೆಸಲು ಅಗತ್ಯವಾದ ಶಕ್ತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿವೆ. ಪ್ರಧಾನ ಮಂತ್ರಿಯವರು ಸ್ಕಿಲ್ ಇಂಡಿಯಾ ಮೂಲಕ ಕೌಶಲ್ಯವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಕೌಶಲ್ಯಾಭಿವೃದ್ದಿ ತರಬೇತಿಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನಾವು ಬೆಳೆಯುವುದರೊಂದಿಗೆ ಜೊತೆಯಲ್ಲಿರುವವರನ್ನು ಬೆಳೆಸಬೇಕು. ಸಮಾಜದ ಅಭಿವೃದ್ದಿಗೆ ಪೂರಕವಾದ ಆಲೋಚನೆಗಳು ಮತ್ತು ಯೋಜನೆಗಳನ್ನು ಮಾಡಬೇಕೆಂದರು.


  ===============
  ಬೃಹತ್ ಉದ್ಯೋಗ ಮೇಳದಲ್ಲಿ ಬೆಳಗ್ಗೆಯಿಂದಲೇ ತೆರೆಯಲಾದ ವಿವಿಧ ಮಳಿಗೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಕಾಲೇಜಿನ ಕೊಠಡಿಗಳಲ್ಲಿ ಸಂದರ್ಶನ ನಡೆಸಿ ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಣೆ ಆಗುವುದು.
======================
   ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಸ್ವಾಗತಿಸಿದರು. ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಕೌಶಲ್ಯಾಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಸುರೇಶ್ ಇತರೆ ಅಧಿಕಾರಿಗಳು ಹಾಜರಿದ್ದರು.

Exit mobile version