Site icon TUNGATARANGA

ಜಿಲ್ಲಾ ಉಸ್ತುವಾರಿ ಸಚಿವ ಯಾರೆಂಬುದೇ ನನಗೆ ತಿಳಿದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು ವ್ಯಂಗ್ಯ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಯಾರೆಂಬುದೇ ನನಗೆ ತಿಳಿದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮದೇ ಪಕ್ಷದ ಸಚಿವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಅವರು ಇಂದು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಕೆಡಿಪಿ ಸಭೆ ಇದ್ದು, ಈ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ಗೊತ್ತೂ ಇಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದೂ ಇಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.


ನಾನು ಕೂಡ ಎಂಪಿ ಆಕಾಂಕ್ಷಿಯಾಗಿದ್ದೇನೆ. ಯಾರು ಬೇಕಾದರೂ ಆಕಾಂಕ್ಷಿಗಳಾಗಬಹುದು. ಅದಕ್ಕೆ ನನ್ನ ಅಭ್ಯಂತರವಿಲ್ಲ. ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಹೆಚ್.ಎಸ್. ಸುಂದರೇಶ್ ಸಹ ಆಕಾಂಕ್ಷಿಗಳಾಗಬಹುದು. ಆದರೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ರಾಘವೇಂದ್ರ ಅವರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನನಗಿದೆ. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ ಎಂದರು.


ರಾಜ್ಯದಲ್ಲಿ ಬಿಜೆಪಿ ಮುಖಂಡರು ತಡವಾಗಿಯಾದರೂ ಬರ ಅಧ್ಯಯನ ಮಾಡುತ್ತಿರುವುದು ಸ್ವಾಗತ. ಆದರೆ ಇದನ್ನು ರಾಜಕೀಯವಾಗಿ ಬಳಕೆ ಮಾಡುತ್ತಿರುವುದು ಖಂಡನೀಯ. ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಸಂಭವಿಸಿದ ಮಳೆಹಾನಿಗೆ ಪರಿಹಾರ ಇದುವರೆಗು ಸಿಕ್ಕಿಲ್ಲ. ಈಗ ಬರ ಪರಿಹಾರಕ್ಕಾಗಿ ಒತ್ತಾಯಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕಳೆದ ಮಳೆಗಾಲದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಪ್ರಧಾನಿ ನರೇಂದ್ರಮೋದಿಯವರು ಸಮೀಕ್ಷೆ ನಡೆಸಿದ್ದರೂ ಹಣ ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.


ಇದುವರೆಗೆ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ ಎಂದು ಟೀಕಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರ ವೀಕ್ಷಣೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡಿರುವುದು ಈಗ ಅದೇ ಪಕ್ಷಕ್ಕೆ ತಿರುಮಂತ್ರವಾಗಿದೆ. ಜೆಡಿಎಸ್‌ನ ೧೯ ಶಾಸಕರನ್ನು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರೆಸಾರ್ಟ್‌ನಲ್ಲಿ ಕೂಡಿಹಾಕಿದ್ದಾರೆ. ಬೇರೆ ಪಕ್ಷಕ್ಕೆ ಹಾನಿ ಮಾಡಿದರೆ ನಿಮ್ಮ ಪಕ್ಷಕ್ಕೆ ಮುಳುವಾಗುತ್ತದೆ ಎಂದರು.


ಬಿಜೆಪಿ ಕೆ.ಎಸ್. ಈಶ್ವರಪ್ಪ ಹಾಗೂ ನಳಿನ್‌ಕುಮಾರ್ ಕಟೀಲ್ ಅವರನ್ನು ಕಟ್ಟಿಕೊಂಡು ಹೋದರೆ ಕಳೆದ ಚುನಾವಣೆಯಲ್ಲಿ ೬೯ ಸ್ಥಾನ ಗಳಿಸಿರುವ ಪಕ್ಷ ೪೦ಕ್ಕೆ ಇಳಿಯಲಿದೆ. ಸರ್ಕಾರದ ಬದ್ಧತೆ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಗೆ ಬದ್ಧತೆ ಇದ್ದರೆ ರಾಜ್ಯ ಸರ್ಕಾರಕ್ಕೆ ಬರುವ ಹಣವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದರು.


ಪಿಎಸ್‌ಐ ಹಗರಣದಲ್ಲಿ ಬಿ.ವೈ. ವಿಜಯೇಂದ್ರ ಅವರ ಕೈವಾಡವಿದೆ ಎಂಬ ಶಂಕೆ ಇದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಡಿಸಿಸಿ ಬ್ಯಾಂಕ್ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸಂಸದರ ಪಾಲಿದೆ. ಇದನ್ನು ಸಹ ತನಿಖೆ ನಡೆಸಬೇಕು ಅಲ್ಲದೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ವರ್ಗಾವಣೆ ಮಾಡಿದರೆ ಸಾಲದು. ಆತನ ಭ್ರಷ್ಟಾಚಾರಗಳ ಬಗ್ಗೆ ತನಿಖೆಯಾಗಬೇಕು ಎಂದರು.

Exit mobile version