ಶಿವಮೊಗ್ಗ: ಜಿಲ್ಲೆಯ ಪಟಾಕಿ ಮಾರಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸಿ ಪಟಾಕಿ ಮಾರಾಟಗಾರರ ಪರವಾನಿಗೆ ಹಾಗೂ ಸಂಬಂಧಪಟ್ಟ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್.ಗೌಡ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಲೈಸೆನ್ಸ್ ಹೊಂದಿರುವ ಜಿಲ್ಲೆಯ ಪಟಾಕಿ ಮಾರಾಟಗಾರರಿಗೆ ಸಾಂಪ್ರದಾಯಿಕ ಪಟಾಕಿಯನ್ನು ಹೊರತುಪಡಿಸಿ ಹೈಕೋರ್ಟ್ ಆದೇಶದಂತೆ ಹಸಿರು ಪಟಾಕಿಯನ್ನೇ ಮಾರಾಟ ಮಾಡುವಂತೆ ತಾವು ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲೆಯಾದ್ಯಂತ ಪರವಾನಿಗೆ ಹೊಂದಿರುವ ಪಟಾಕಿ ಮಾರಾಟಗಾರರ ಬಳಿ ಹಸಿರ ಪಟಾಕಿಗಳು ಇರುವುದಿಲ್ಲ.೨೦೧೭ಕ್ಕೂ ಹಿಂದೆ ತಯಾರಾಗುತ್ತಿದ್ದ ಹಳೆಯ ಸಾಂಪ್ರದಾಯಿಕ ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಕಾರಣ ಹಸಿರು ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳ ಬೆಲೆಗಿಂತ ಹೆಚ್ಚಿರುತ್ತದೆ. ಪರಿಸರ ಮಾಲಿನ್ಯ ಇಲಾಖೆ ಪರವಾನಿಗೆಯನ್ನು ಪರಿಶೀಲಿಸದೆ ನಿರ್ಲಕ್ಷ್ಯದಿಂದಾಗಿ ೨೦೧೭ಕ್ಕೂ ಹಿಂದೆ ತಯಾರಾಗುತ್ತಿದ್ದ ಪಟಾಕಿಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುವ ರಾಸಾಯನಿಕಗಳು ಹೆಚ್ಚು ಸೇರ್ಪಡೆಯಾಗುತ್ತಿದ್ದವು. ಹೈಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನೇ ಮಾರಾಟ ಮಾಡುವಂತೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಆದ್ದರಿಂದ ಜಿಲ್ಲೆಯಾದ್ಯಂತ ಹಸಿರು ಪಟಾಕಿಗಳು ಮಾರಾಟಗಾರರ ಬಳಿ ಇವೆಯೇ ಎಂದು ಖಚಿತಪಡಿಸಿಕೊಂಡು ಪರವಾನಿಗೆ ನವೀಕರಣ ಮಾಡಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಿ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಗಣೇಶ್ ಮತ್ತು ತ್ಯಾಗರಾಜ್ ಭಾಗವಹಿಸಿದ್ದರು.