Site icon TUNGATARANGA

ಪತ್ರಿಕೆ ನಡೆಸುವುದು ಎಂತ ಕಷ್ಟ ಗೊತ್ತಾ?, ಕ್ರಾಂತಿದೀಪ ಮುದ್ರಣಾಲಯ ಉದ್ಘಾಟನೆಯಲ್ಲಿ ಸಚಿವ ಮಧು


ಶಿವಮೊಗ್ಗ, ನ.4:
ನಾನು ಕೂಡ ಪತ್ರಿಕೆಯನ್ನು ನಡೆಸುತ್ತಿದ್ದೆ. ಪತ್ರಿಕೆ ನಡೆಸುವುದು ಅದೆಂತಾ ಕಷ್ಟ ಎಂಬ ಅರಿವು ನನಗಿದೆ ಎಂದು ಹಳೆಯ ನೆನಪುಗಳನ್ನು ಸಚಿವ ಮಧು ಬಂಗಾರಪ್ಪ ಅವರು ಮೆಲುಕು ಹಾಕಿದರು.
ಶಿವಮೊಗ್ಗದ ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಮುದ್ರಣಾಲಯವನ್ನು ಶಿಕ್ಷಣ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಯಾವುದೇ ಒಂದು ಪತ್ರಿಕೆ ಹುಟ್ಟಿಗೆ ಒಂದು ಬಲವಾದ ಕಾರಣವಿರುತ್ತದೆ. ಅಂತಹ ಕಾರಣ ಕ್ರಾಂತಿದೀಪಕ್ಕೂ ಇದೆ ಎಂದು ಬಾವಿಸುತ್ತೇನೆ ಎಂದು ಹೇಳಿದರು.
ನಾನು ಮುದ್ರಣ ಮಾದ್ಯವವನ್ನು ಈ ಹಿಂದೆ ಆಕಾಶ್ ಸಂಸ್ಥೆ ಮಾಡುವಾಗ ನಡೆಸುತ್ತಿದ್ದೆ. ಆಗ ಪೊಲೀಟಿಕ್ಸ್ ಪಾಂಪ್ಲೇಟ್, ಬ್ಯಾನರ್ ಬಂಟಿಂಗ್ಸ್ ಗಳನ್ನು ಮಾಡುತ್ತಿದ್ದೆ. ಸದಾಶಿವ ನಗರದಲ್ಲಿ ಸ್ಟಾರ್ ದಿನ ಪತ್ರಿಕೆಯನ್ನು ಸಹ ಮಾಡಿದ್ದೆ. ಸಿನಿಮಾ ನಟರ ಫೋಟೋ ಶೂಟ್ ನ್ನು ಭಿನ್ನ ರೀತಿಯಲ್ಲಿ ಕ್ಲಿಕ್ಕಿಸಿ ಕ್ವಾಲಿಟಿ ಪೇಪರ್ ನಲ್ಲಿ ಮುದ್ರಿಸಿ ಪ್ರಕಟಿಸುತ್ತಿದ್ದೆವು. ಸಿನಿಮಾ ಲ್ಯಾಂಡ್ ನ ಜಾಹಿರಾತು ಮೂಲದಿಂದ ಬರುವ ಆದಾಯದಿಂದ ಪತ್ರಿಕೆ ಕಟ್ಟಬೇಕೆಂಬ ಉದ್ದೇಶ ನನ್ನದಾಗಿತ್ತು. ಆದರೆ ಅಲ್ಲಿ ಕೂಡ ಆರಂಭದಲ್ಲಿ ಸಿಕ್ಕ ಜಾಹಿರಾತು ನಿರೀಕ್ಷಿಸಿದಂತೆ ಕೊನೆ ದಿನಗಳಲ್ಲಿ ಸಿಗಲಿಲ್ಲ. ಹೀಗಾಗಿ ಪತ್ರಿಕೆಯನ್ನು ಕ್ಲೋಸ್ ಮಾಡಬೇಕಾಗಿ ಬಂತು. ಆದರೆ ಆ ಟೈಟಲ್ ಈಗಲೂ ನನ್ನ ಬಳಿ ಇದೆ ಎಂದು ಮಧು ಬಂಗಾರಪ್ಪ ಹಳೆ ನೆನಪುಗಳನ್ನು ಮೆಲಕು ಹಾಕಿದರು. ನಾನು ವಾಣಿಜ್ಯ ಉದ್ದೇಶದಿಂದಲೇ ಸ್ಟಾರ್ ದಿನ ಪತ್ರಿಕೆಯನ್ನು ಆರಂಭಿಸಿದೆ. ಅವಾರ್ಡ್ ಮತ್ತು ರಿವಾರ್ಡ್ ಎರಡು ಉದ್ದೇಶಗಳನ್ನಿಟ್ಟುಕೊಂಡು ಪತ್ರಿಕೆಯನ್ನು ಕಟ್ಟಬೇಕೆಂದು ಕೊಂಡಿದ್ದೆ. ಆದರೆ ನಾನು ನಿರ್ಮಿಸಿದ ಕಲ್ಲರಳಿ ಹೂವಾಗಿ ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಬಂತು. ಗುಡ್ ಕ್ರಿಟಿಕ್ ಗಾಗಿ ಆ ಅವಾರ್ಡ್ ಬಂದಾಗ ನನಗೆ ಅತೀವ ಸಂತೋಷವಾಗಿತ್ತು. ಜಾಹಿರಾತು ಇಲ್ಲದೆ ಒಂದು ಪತ್ರಿಕೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಸೋಷಿಯಲ್ ಮಿಡಿಯಾ ಅಬ್ಬರದಲ್ಲಿ ಜಾಹೀರಾತುಗಳು ಕೂಡ ಪತ್ರಿಕೆಗಳಿಗೆ ಕಡಿಮೆಯಾಗುತ್ತಿದೆ. ಇಂತಹ ಸವಾಲಿನ ಸಂದರ್ಭದಲ್ಲೂ ಪತ್ರಿಕೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡು ಸಮಾಜದ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಮ್ಮ ಮುಖ ಹೇಗಿದೆ ಎಂಬುದಕ್ಕೆ ಕನ್ನಡಿ ನೋಡುತ್ತೇವೆ. ಅದೇ ರೀತಿ ಸಮಾಜ ಹೇಗಿದೆ ಎಂಬುದಕ್ಕೆ ಪ್ರತಿದಿನ ಪತ್ರಿಕೆ ಓದುತ್ತೇವೆ. ಪ್ರಸ್ಥುತ ದಿನಗಳಲ್ಲಿ ಕೆಲ ಪತ್ರಿಕೆಗಳು ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿವೆ. ನಾನು ಈಗಲೂ ಪ್ರಜಾವಾಣಿ ಪತ್ರಿಕೆಯ ಪರ್ಮನೆಂಟ್ ಸಬ್ ಸ್ಕೈಬರ್. ಹಾಗಂತ ಬೇರೆಯವರು ಅಪಾರ್ಥ ಮಾಡಿಕೊಂಡರೂ ಚಿಂತೆಯಿಲ್ಲ. ಪ್ರಜಾವಾಣಿ ಪತ್ರಿಕೆಯು ಸುದ್ದಿ ವಿಚಾರದಲ್ಲಿ ಎಲ್ಲಿ ಕೂಡ ರಾಜೀ ಮಾಡಿಕೊಂಡಿಲ್ಲ. ನೈಜ ಸುದ್ದಿಯನ್ನೇ ನೀಡುತ್ತಾ ಬಂದಿರುವುದರಿಂದ ಪತ್ರಿಕೆ ಮೇಲಿನ ವಿಶ್ವಾಸ ಗಟ್ಟಿಯಾಗಿದೆ.

ಕ್ರಾಂತಿದೀಪ ಪತ್ರಿಕೆ ಸಂಪಾದಕರ ಕಷ್ಟದ ದಿನಗಳಲ್ಲಿ ನಾನು ಅವರ ಜೊತೆಗಿದ್ದೆ. ಮಂಜಣ್ಣನ್ನವರದ್ದು ಹೋರಾಟದ ಬದುಕು. ಅವರ ಪತ್ರಿಕೆ ಹಾಗು ಮುದ್ರಣಾಲಯವು ಚೆನ್ನಾಗಿ ನಡೆಯಲಿ ಎಂದು ಕಿಮ್ಮನೆ ರತ್ನಾಕರ್ ಸಿಬ್ಬಂದಿಗಳಿಗೂ ಕೂಡ ಹಾರೈಸಿದರು.
ಕರಾವಳಿ ಮುಂಜಾವು ಪತ್ರಿಕೆ ಗಂಗಾಧರ್ ಹಿರೇಗುತ್ತಿಯವರು ಮಾತನಾಡಿ, ಕ್ರಾಂತಿದೀಪ ಪತ್ರಿಕೆ ಸಂಪಾದಕ ಮಂಜಣ್ಣನವರು ಇಂದು ಮುದ್ರಣಾಲಯವನ್ನು ಮಾಡಿರುವುದು ಓದುಗರಲ್ಲಿ ಆತ್ಮವಿಶ್ಸಾಸವನ್ನು ಹೆಚ್ಚಿಸುವಂತೆ ಮಾಡಿದೆ. ಓದುಗರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ. ಇಂದು ಸಾಮಾಜಿಕ ಜಾಲತಾಣಗಳಿದ್ರೂ, ಎಲೆಕ್ಟ್ರಾನಿಕ್ ಮಿಡಿಯಾಗಳಿದ್ದರೂ, ಜನರು ಅಂತಿಮವಾಗಿ ನಂಬುವುದು ಪತ್ರಿಕೆಯನ್ನು. ಈಗ ಪತ್ರಿಕೆಗಳು ನಿರಾಸೆಗೊಳ್ಳುವ ಸಂದರ್ಭಗಳಿಲ್ಲ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನಿರಾಸೆ ಎಂಬುದು ಜಾಹಿರಾತುಗಳಿಲ್ಲದೆ ಪುರವಣಿಗಳಿಲ್ಲದೆ ಪತ್ರಿಕೆಗಳನ್ನು ಮುನ್ನೆಡುಸುವುದು ಕಷ್ಟವಾಗುತ್ತದೆ. ಮೂರು ವರ್ಷಗಳ ಹಿಂದೆ ಪ್ರತಿಯೊಂದು ವಿಷಯಗಳ ಕುರಿತು ಬರೆಯುತ್ತಿದ್ದ ಸುದ್ದಿಗಳು ಈಗ ಇಲ್ಲದಾಗಿದೆ. ಮತ್ತೆ ಪತ್ರಿಕೋಧ್ಯಮ ಬಲಿಷ್ಟವಾಗಬೇಕಿದೆ. ನಮ್ಮ ಎಡಿಟರ್ಸ್ ಸಬ್ ಎಡಿಟರ್ಸ್ ರಿಪೋರ್ಟಸ್ ಒಂದು ರೀತಿಯಲ್ಲಿ ನಿಶ್ಕ್ರೀಯರಾಗಿದ್ದಾರೆ. ಎಲ್ಲಾ ಪತ್ರಿಕೆಗಳು ಬದುಕಬೇಕಾದ ಅಗತ್ಯತೆಯಿದೆ ಜನರ ವಿಶ್ವಾಸ ಉಳಿಸಿಕೊಳ್ಳುವ ತುರ್ತು ಕೂಡ ಇದೆ ಎಂದು ಗಂಗಾಧರ್ ಹಿರೋಗುತ್ತಿ ಹೇಳಿದರು.


ಈಶಾನ್ಯ ಟೈಮ್ಸ್ ಸಂಪಾದಕ ನಾಗರಾಜ್ ರವರು ಮುದ್ರಣ ಮಾದ್ಯಮವು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಬೇಕು. ಹಿಂದೆ ತನ್ನ ಸ್ನೇಹಿತ ಸಂಪಾದಕರೊಬ್ಬರ ಅಚ್ಚುಮೊಳೆ ಮುದ್ರಣವಿದ್ದ ಸಂದರ್ಭದಲ್ಲಿ ಮುದ್ರಣದಲ್ಲಾದ ತೊಂದರೆಯನ್ನು ಹಾಸ್ಯದ ಮೂಲಕ ಮೆಲಕು ಹಾಕಿದರು. ಅಚ್ಚುಮೊಳೆಯಿದ್ದ ಕಾಲದಲ್ಲಿಯೇ ವೆಬ್ ಪ್ರಿಂಟಿಂಗ್ ಬಂದಿತ್ತು. ಆ ಸಂದರ್ಭದಲ್ಲಿ ಸ್ನೇಹಿತ ಸಂಪಾದಕರೊಬ್ಬರು ಇನ್ನು ಅಚ್ಚುಮೊಳೆಯ ಮುಖಾಂತರವೇ ಪತ್ರಿಕೆ ಮುದ್ರಿಸುತ್ತಿದ್ದರು. ಅಂದು ಜಿಲ್ಲಾ ಪಂಚಾಯತ್ ಕಾರ್ಯಕ್ರಮದ ಹಿಂದಿನ ದಿನ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಎಂದು ಹೆಡ್ ಲೈನ್ ಮುದ್ರಣವಾಗಬೇಕಿತ್ತು. ಆದರೆ ಅಚ್ಚುಮೊಳೆಗೆ ಅವಲಂಬಿತರಾಗಿದ್ದ ಸ್ನೇಹಿತರಿಗೆ ”ಚೆ” ಎನ್ನುವ ಅಚ್ಚುಮೊಳೆ ಸವೆದು ಹೋಗಿತ್ತು. ಅಷ್ಟೆ ಹುಡುಕಿ ತಡಕಾಡಿ ಹೊಂದಿಸಿ ಮುದ್ರಿಸಿದ್ರೂ, ಮಾರನೆ ದಿನ”ಚೆ” ಜಾಗದಲ್ಲಿ “ಬೆ” ಎಂದು ಮುದ್ರಿತವಾಗಿತ್ತು. ಅಂದರೆ ಜಿಲ್ಲಾ ಪಂತಾಯಿತ್ ನಿಂದ ಬೆಕ್ಕು ವಿತರಣೆ ಎಂದು ಮುದ್ರಿತವಾಗಿತ್ತು ಎಂದು ಹಾಸ್ಯದ ಮೂಲಕವೇ ಮುದ್ರಣ ಲೋಪದ ಬಗ್ಗೆ ಹೇಳಿದರು. ಸಂಪಾದಕರು ಆದುನಿಕ ತಂತ್ರಜ್ಞಾನಕ್ಕೆ ತಕ್ಕಹಾಗೆ ಬದಲಾವಣೆ ಯಾಗಬೇಕು. ಪತ್ರಿಕೆಗಳು ಸುದ್ದಿಯ ನೈಜತೆಯನ್ನು ಉಳಿಸಿಕೊಳ್ಳಬೇಕು ಎಂದು ನಾಗರಾಜ್ ಹೇಳಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಿಗೆರೆ ಕ್ರಾಂತಿದೀಪ ಸಂಪಾದಕ ಮಂಜುನಾಥ್ ರವರದ್ದು ಹೋರಾಟದ ಬದುಕು. ಅವರು ಹೋರಾಟದಿಂದ ಪತ್ರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವರು. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್, ಪತ್ರಿಕೆ ಬೆಳೆದು ಬಂದ ಹಾದಿ, ಕಷ್ಟದಲ್ಲಿ ಕೈಹಿಡಿದ ರಾಜಕಾರಣಿ ಸ್ನೇಹಿತರ ನೆನಪುಗಳನ್ನು ಮೆಲುಕು ಹಾಕಿದರು. ಎಸ್. ಬಂಗಾರಪ್ಪನವರು ಕ್ರಾಂತಿದೀಪಕ್ಕೆ ಮಾಡಿದ ಉಪಕಾರವನ್ನು ಸ್ಮರಿಸಿದರು. ಬಂಗಾರಪ್ಪ ಇಲ್ಲದ ಹೊತ್ತಿನಲ್ಲಿ ಅವರ ಪುತ್ರ ಮಧು ಬಂಗಾರಪ್ಪ ಮುದ್ರಣಾಲಯಕ್ಕೆ ಚಾಲನೆ ನೀಡಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಮರಿಯಪ್ಪ,ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್, ಶೇಷಾಛಲ, ವಕೀಲ ಶ್ರೀಪಾಲ್, ಕಾಂಗ್ರೇಸ್ ಮುಖಂಡ ಎಸ್ ಪಿ ದಿನೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ನಾಗರಾಜ್ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ಛಾಯರವರು ಪ್ರಾರ್ಥನೆ ಗೀತೆ ಹಾಡಿದರು.

Exit mobile version