Site icon TUNGATARANGA

ನ. 4 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ನಾಡಿಗೆ ನಾರಿಯ ನಡಿಗೆ’ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಹಾಗೂ ಸಮನ್ವಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನ.೪ರಂದು ಅಂಬೇಡ್ಕರ್ ಭವನದಲ್ಲಿ ‘ನಾಡಿಗೆ ನಾರಿಯ ನಡಿಗೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಪತ್ರಿಕಾಗೋಷ್ಠಿಯಲ್ಲಿ ಇಂದು ಕಾರ್ಯಕ್ರಮದ ವಿವರಣೆ ನೀಡಿದ ಸಮನ್ವಯ ಕಾಶಿ, ನಾಡಹಬ್ಬಕ್ಕೆ ೨ಕಿ.ಮೀ. ನಡಿಗೆ ಘೋಷವಾಕ್ಯದಡಿ ಆಯೋಜಿಸಿರುವ ನಾಡಿಗೆ ನಾರಿಯ ನಡಿಗೆ ಕಾರ್ಯಕ್ರಮದಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಹಾಗೂ ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಬಹುದಾಗಿದೆ ಎಂದರು.


ಅಂಬೇಡ್ಕರ್ ಭವನದ ಆವರಣದಲ್ಲಿ ಆಹಾರ ಮೇಳ, ಆಭರಣಗಳ ಪ್ರದರ್ಶನ ಹಾಗೂ ಮಾರಾಟ, ಸೀರೆಗಳ ಪ್ರದರ್ಶನ ಹಾಗೂ ಮಹಿಳಾ ಮಾರುಕಟ್ಟೆ ಮೇಳವನ್ನು ಬೆಳಿಗ್ಗೆ ೧೧ರಿಂದ ರಾತ್ರಿ ೯ರವರೆಗೆ ಏರ್ಪಡಿಸಲಾಗಿದೆ ಎಂದರು.


ಅಂದು ಮಧ್ಯಾಹ್ನ ೪ ಗಂಟೆಗೆ ನಡಿಗೆ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಉದ್ಘಾಟಿಸಲಿದ್ದು, ನಡಿಗೆಯು ಅಂಬೇಡ್ಕರ್ ಭವನದಿಂದ ಆರಂಭಗೊಂಡು ಗೋಪಿವೃತ್ತ, ಎ.ಎ.ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ, ಮಹಾವೀರ ವೃತ್ತದ ಮೂಲಕ ಮತ್ತೆ ಅಂಬೇಡ್ಕರ್ ಭವನ ತಲುಪಲಿದೆ ಎಂದ ಅವರು, ೬೮ನೇ ರಾಜ್ಯೋತ್ಸವದ ಅಂಗವಾಗಿ ೬೮ ಮೀಟರ್ ಉದ್ದದ ನಮ್ಮ ನಾಡಿನ ಧ್ವಜವನ್ನು ನಡಿಗೆಯಲ್ಲಿ ಪ್ರದರ್ಶಿಸುವುದು ವಿಶೇಷ ಆಕರ್ಷಣೆಯಾಗಿದೆ. ಹಾಗೂ ಕಲಾತಂಡಗಳು ಭಾಗವಹಿಸಲಿವೆ ಎಂದ ಅವರು, ಸಂಜೆ ೬ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.


ರಾಜ್ಯದಲ್ಲೇ ಪ್ರಥಮ ಬಾರಿಗೆ ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ವಿಭಿನ್ನ ಶೈಲಿಯ ಸೀರೆಯುಟ್ಟು ನಮ್ಮ ನಾಡು ನುಡಿ ಪರಂಪರೆ, ಸಂಸ್ಕೃತಿ ಬಿಂಬಿಸುವ ಉಡುಗೆ-ತೊಡುಗೆಯ ವಸ್ತ್ರ ಸಂಹಿತೆಯಲ್ಲಿ ಮಹಿಳೆಯರು ಭಾಗವಹಿಸಬೇಕು. ಪ್ರವೇಶ ಶುಲ್ಕ ಒಂದು ತಂಡಕ್ಕೆ ೫೦೦ರೂ. ಹಾಗೂ ಒಬ್ಬರಿಗೆ ೧೦೦ರೂ. ಇದ್ದು, ಮೊದಲ ಬಹುಮಾನ ೧೫,೦೦೦, ಎರಡನೇ ಬಹುಮಾನ ೧೦,೦೦೦ ಹಾಗೂ ಮೂರನೇ ಬಹುಮಾನ ೫,೦೦೦ ಇರಲಿದೆ ಎಂದರು.


ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾಗೂ ಸ್ಟಾಲ್‌ಗಳಿಗಾಗಿ ಹೆಸರು ನೊಂದಾಯಿಸುವವರು ಅ.೩೧ರೊಳಗಾಗಿ ಮೊ:೯೯೮೦೧೮೧೪೮೮ ಅಥವಾ ೯೯೪೫೩೮೭೬೫೦ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ರವೀಂದ್ರಕುಮಾರ್ ಕೆ., ಕಾರ್ಯದರ್ಶಿ ರವೀಂದ್ರ ಬೆಣ್ಣೆಹಳ್ಳಿ, ಪದಾಧಿಕಾರಿಗಳಾದ ನಿರಂಜನಿ ರವೀಂದ್ರ, ಶ್ವೇತಾ ಆಚಾರ್ಯ, ಗಿರಿಜಾ ರವೀಂದ್ರ, ಬಿಂದು, ಕುಶಾಲ್ ಇದ್ದರು.

Exit mobile version