Site icon TUNGATARANGA

ಬಿಎಡ್ ಪ್ರಶಿಕ್ಷಣಾರ್ಥಿಗಳ‌ ಸಂಪರ್ಕ ಕಾರ್ಯಕ್ರಮ|ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಶಿಕ್ಷಣ ಅತ್ಯಗತ್ಯ : ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್

ಶಿವಮೊಗ್ಗ : ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ನಾಗರಿಕ ಸಾಮಾಜಿಕ ಮೌಲ್ಯಗಳನ್ನು ಹೊಂದಿದ ಸರ್ವಾಂಗೀಣ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.

Click

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ‌ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರಥಮ ಮತ್ತು ದ್ವಿತೀಯ ಬಿಎಡ್ ಪ್ರಶಿಕ್ಷಣಾರ್ಥಿಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ನಾವು ಕಲಿತ ಶಿಕ್ಷಣ ನಮ್ಮನ್ನು ಎಡವಲು ಬಿಡುವುದಿಲ್ಲ, ಹಾಗೇಯೇ ಸಂಸ್ಕಾರ ಬದುಕಿನಲ್ಲಿ ಕೆಡವಲು ಬಿಡುವುದಿಲ್ಲ. ಶಿಕ್ಷಕರು ಪಾಠದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿತ್ತುವ ಕಾರ್ಯ ಮಾಡಬೇಕಿದೆ.

ಆಸಕ್ತಿಯ ಅನುಗುಣವಾಗಿ ಕಲಿಕೆಯ ಪರಿಪಕ್ವತೆ ಸಿಗಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜ್ಞಾನ ಕಲಿಸುವ ಎಲ್ಲರೂ ಪೂಜ್ಯನೀಯರು. ರೈತ, ಸೈನಿಕ ಮತ್ತು ಶಿಕ್ಷಕ ದೇಶದ ಚರಿತ್ರೆಯನ್ನು ಬದಲಾಯಿಸಬಹುದು. ಅಂತಹ ಬದಲಾವಣೆಗಾಗಿ ಕಲಿಕೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಜವಾಬ್ದಾರಿ ಶಿಕ್ಷಕರ‌ ಮೇಲಿದೆ. 

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ನೀಡಲು ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ. ಸರ್ಕಾರಿ ಶಾಲೆಗಳು ಎಂದಿಗೂ ಕೀಳಲ್ಲ. ಅಗತ್ಯ ಸೌಕರ್ಯಗಳನ್ನು ಸರಿಯಾಗಿ ನೀಡಿದ್ದೆ ಆದಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಸಾಟಿಯಿಲ್ಲವೆಂಬಂತೆ ರೂಪಿಸಬಹುದಾಗಿದೆ.

ಪೋಷಕರಲ್ಲಿ ಗುಣಾತ್ಮಕ ಶಿಕ್ಷಣಕ್ಕಿಂತ ಧನಾತ್ಮಕ ಶಿಕ್ಷಣದ ಬಗ್ಗೆ ಯೋಚನೆಗಳು ಹೆಚ್ಚಾಗುತ್ತಿರುವುದು ದುರಂತ. ಉತ್ತಮ ಮಾತಿನ ಕಲೆಯನ್ನು ಮಕ್ಕಳಲ್ಲಿ ಕಲಿಸಬೇಕು. ವೇದ ತಿಳಿದವರು ಜ್ಞಾನಿಯಲ್ಲ, ವೇದನೆಯನ್ನು ತಿಳಿದವರು ನಿಜವಾದ ಜ್ಞಾನಿ. ಮಕ್ಕಳಲ್ಲಿನ ಕಲಿಕಾ ನ್ಯೂನತೆಗಳನ್ನು ಅರಿತು ತಾಳ್ಮೆಯಿಂದ ಅದನ್ನು ತಿದ್ದುವ ಪ್ರಯತ್ನ ಮಾಡಿ ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಅನುಭವಾಧಾರಿತ ಕಲಿಕೆ ನೀಡುವಷ್ಟು ಜ್ಞಾನ ಯಾವ ಪುಸ್ತಕದಿಂದಲು ಸಿಗಲಾರದು. ಅಂತಹ ಜ್ಞಾನವನ್ನು ಮುಕ್ತವಾಗಿ ಸ್ವೀಕರಿಸುವ ಕಿವಿ ಮತ್ತು ತೆರೆದುಕೊಳ್ಳುವ ಮನಸ್ಸು ಶಿಕ್ಷಕರದಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹ ಸಂಯೋಜಕರಾದ ಡಾ‌.ಮಂಜು.ಎನ್.ಡಿ, ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version