Site icon TUNGATARANGA

ನಿಯಂತ್ರಣ ಕ್ರಮ ಮತ್ತು ಪರೀಕ್ಷೆಯಿಂದ ಕೆಎಫ್‍ಡಿ ನಿಯಂತ್ರಿಸಲು: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ


ಶಿವಮೊಗ್ಗ, ಅಕ್ಟೋಬರ್
      ಜಾನುವಾರುಗಳ ಮೇಲಿನ ಉಣ್ಣಿ(ಟಿಕ್) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಕ್ಯಾಸನೂರು ಫಾರೆಸ್ಟ್ ಡಿಸೀಸ್‍ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ತಿಳಿಸಿದರು.
     ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಎಫ್‍ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ಮಲೆನಾಡಿನ ಅತಿ ಹೆಚ್ಚು ಉಣ್ಣಿಗಳಿರುವ ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳಿಗೆ ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಜಾನುವಾರುಗಳಿಗೆ ಐವರ್‍ಮೆಕ್ಟಿನ್/ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜಾನುವಾರುಗಳ ಬೆನ್ನಿನ ಮೇಲೆ ಪೊರಾನ್ ಸಿಂಪಡಿಸಬೇಕು.  ರೈತರು ಜಾನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.


    ಉಣ್ಣಿಗಳ ಹೊಸ ಹಾಟ್‍ಸ್ಪಾಟ್‍ಗಳನ್ನು ಕಡಿಮೆ ಮಾಡಬೇಕು. ರೈತರಿಗೆ ಉಣ್ಣಿ ನಿಯಂತ್ರಣ ಮತ್ತು ಕೆಎಫ್‍ಡಿ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಟಿಕ್ ಮಾದರಿ ಪರೀಕ್ಷೆ, ಟಿಕ್ ಸರ್ವೇಕ್ಷಣೆಯನ್ನು ಕೈಗೊಳ್ಳಬೇಕು. ಸಂಶಯಾಸ್ಪದ ಕೆಎಫ್‍ಡಿ ಪ್ರಕರಣಗಳನ್ನು ಶೀಘ್ರ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಶಿಕ್ಷಣವನ್ನು ಹೆಚ್ಚಿಸಬೇಕೆಂದರು.


    ಕೆಎಫ್‍ಡಿ ನಿಯಂತ್ರಣದಲ್ಲಿ ಪಶುಪಾಲನ ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ತರಬೇತಿ ಹೊಂದಿದ ಸಿಬ್ಬಂದಿಗಳಿಂದ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಸಾಕು ಪ್ರಾಣಿಗಳಲ್ಲಿ ಉಣ್ಣಿ ನಿಯಂತ್ರಕಗಳನ್ನು ಬಳಸಬೇಕು.


     ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯರು ಮತ್ತು ಸಂಬಂಧಿಸಿದ ಪಿಡಿಓ ರವರು ಅದನ್ನು ವರದಿ ಮಾಡಬೇಕು. ಹಾಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, 60 ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ, ಇಲ್ಲಿ ಮಾನವರ, ಇತರೆ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು.


    ಗ್ರಾಮ ಸಭೆಗಳಲ್ಲಿ ಕೆಎಫ್‍ಡಿ ಕುರಿತು ಅರಿವು ಮೂಡಿಸಿ, ಗ್ರಾಮಗಳಲ್ಲಿ ಈ ಕುರಿತಾದ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಹೆಚ್ಚಬೇಕು. ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ತಂಡ ಕ್ಷೇತ್ರ ಭೇಟಿ ನೀಡಬೇಕು. ಸ್ಥಳೀಯ ಸಭೆಗಳಲ್ಲಿ ಇದರ ಬಗ್ಗೆ ಮಾಹಿತಿ ನಿಡಬೇಕು. ಪಿಡಿಓ ಗಳು ಸಹ ಸಹಕರಿಸಬೇಕು.


     ಡಿಹೆಚ್‍ಓ 24ಗಂಟೆಗೂ ಅಧಿಕವಾದ ಜ್ವರವನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 2021 ರಲ್ಲಿ 14839 ನಾಯಿ ಕಡಿತದಲ್ಲಿ 03 ರೇಬಿಸ್ ಸಾವು ಸಂಭವಿಸಿದೆ. 2022 ರಲ್ಲಿ 19593 ನಾಯಿ ಕಡಿತ ಪ್ರಕರಣಗಳಲ್ಲಿ 1 ರೇಬಿಸ್‍ನಿಂದ ಸಾವು ಹಾಗೂ 2023 ರಲ್ಲಿ 16934 ನಾಯಿ/ಬೆಕ್ಕು ಕಡಿತ ಪ್ರಕರಣ ದಾಖಲಾಗಿದ್ದು ಬೆಕ್ಕು ಕಡಿತದಿಂದ ಸೊರಬದಲ್ಲಿ 01 ಸಾವು ಸಂಭವಿಸಿದೆ. 2020 ರಿಂದ 2023 ರ ಆಗಸ್ಟ್ ಮಾಹೆವರೆಗೆ ಜಿಲ್ಲೆಯಲ್ಲಿ ರೇಬಿಸ್‍ನಿಂದ 8 ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.


    ಜಿಲ್ಲಾಧಿಕಾರಿಗಳು, ರೇಬಿಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆಗಳ ಲಭ್ಯತೆ ಇರಬೇಕು. ಹಾವು ಕಡಿತ ಮತ್ತು ರೇಬಿಸ್ ಲಸಿಕೆಗಳನ್ನು ಯಾವುದೇ ದಾಖಲೆಗಳಿಗೆ ಕಾಯದೆ ಶೀಘ್ರವಾಗಿ ನೀಡಬೇಕೆಂದು ಸೂಚಿಸಿದರು.

Exit mobile version