ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಹೊತ್ತಿಗೆ, ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರೂ. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ. ಓದಿ.
ಪ್ರಿಯ ದಿವಂಗತ ಬೂದುಗುಂಬಳ ಕಾಯಿಗೆ,
ನಾನು ತುಂಬಾ ನೊಂದುಕೊಂಡು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನೆಯ ದಿನ ಆಯುಧಪೂಜೆ. ನಾನು ಡಿ.ವಿ.ಜಿ. ರಸ್ತೆಯಲ್ಲಿ ಉದ್ದಕ್ಕೆ ನಡೆದುಕೊಂಡು ಒಬ್ಬ ಸ್ನೇಹಿತನ ಮನೆಗೆ ಹೋಗುತ್ತಿದ್ದೆ. ದಾರಿಯುದ್ದಕ್ಕೂ ನಿನ್ನನ್ನು ಅಮಾನುಷವಾಗಿ ಕೊಂದಿರುವ ಹತ್ತಾರು ದಾರುಣ ದೃಶ್ಯವನ್ನು ನೋಡಿ ನನಗೆ ತಡೆಯಲಾರದಷ್ಟು ದುಃಖವಾಯಿತು. ಬಡವರಿಂದ ಮೊದಲ್ಗೊಂಡು ಪಂಚತಾರಾ ಹೋಟೆಲುಗಳ ಅಡುಗೆ ಮನೆಗಳಲ್ಲಿ ಉಳಿದ ದಿನಗಳಲ್ಲಿ ತುಂಬಾ ಪ್ರೀತಿ ಆದರಗಳಿಂದ ನಿನ್ನನ್ನು ಹೆಚ್ಚಿ ಹುಳಿಯನ್ನೋ, ಮಜ್ಜಿಗೆ ಹುಳಿಯನ್ನೋ, ಮಾಡಿ ತಿಂದು ಸಂತೋಷಪಡುತ್ತಾರೆ. ನಿನಗೂ ಅದೇ ಬೇಕಾದದ್ದು, ಮಜ್ಜಿಗೆ ಹುಳಿಯಲ್ಲಿ ನಿನ್ನ ಜೀವನದ ಸಾರ್ಥಕತೆಯನ್ನು ಕಾಣುತ್ತೀಯಾ. ಸಾವಿನಲ್ಲೂ ಸಂತೋಷಪಡುತ್ತೀಯ. ನಿನ್ನಂತಹ ನಿಸ್ವಾರ್ಥ, ನಿಷ್ಕಪಟ ಹುತಾತ್ಮರು ಮನುಷ್ಯರಲ್ಲಿ ಸಿಗುವುದೇ ಅಪರೂಪ.
ಅಡುಗೆ ಮನೆಯಲ್ಲಿ ನಿನ್ನನ್ನು ಹಚ್ಚುವುದೇ ಒಂದು ಕಲೆ. ಆದರೆ ಆಯುಧ ಪೂಜೆ ದಿನ ಬೀದಿಯಲ್ಲಿ ಹಾಡು ಹಗಲಿನಲ್ಲಿ ನಿನ್ನನ್ನು ಕೊಲೆ, ಕಗ್ಗೊಲೆ ಮಾಡುತ್ತಾರೆ. ನಿನ್ನನ್ನು ನೆಲದ ಮೇಲೆ ತೆಂಗಿನಕಾಯಿಯನ್ನು ಬಂಡೆಯ ಮೇಲೆ ಈಡುಗಾಯಿ ಒಡೆದಂತೆ ಬಡಿದಾಗ ನಿನ್ನ ಹೋಳುಗಳು ದಿಕ್ಕಾಪಾಲಾಗಿ ಅಸ್ತವ್ಯಸ್ತವಾಗಿ ಬಿದ್ದಿರುವ ದೃಶ್ಯ ಎಂತಹವರ ಮನಸ್ಸನ್ನೂ ಕರಗಿಸುತ್ತದೆ. ಜೊತೆಗೆ ರಕ್ತದ ನೆನಪು ತಂದುಕೊಡಲು ಕೆಂಪು ಬಣ್ಣ ಬೇರೆ. ನಿಜವಾಗಿಯೂ ನಿನ್ನದು ಆಕಾಲ ಹೃದಯ ವಿದ್ರಾವಕ, ಅಪಮೃತ್ಯು. ಇದೆಲ್ಲಾ ಅನುಭವಿಸುವುದು ನಿನ್ನ ಕರ್ಮ ಅಂತ ಕಾಣುತ್ತದೆ.
ಹಾಗೇ ಇನ್ನು ನಾಲ್ಕು ಹೆಜ್ಜೆ ಮುಂದೆ ಬಂದೆ. ಗಾಂಧೀ ಬಜಾರ್ ಕಾಲು ಹಾದಿಯಲ್ಲಿ ಬಾಳೆಕಂದು, ಕಂದಮ್ಮಗಳನ್ನು ಕತ್ತರಿಸಿ ಸಾಲಾಗಿ ಮಲಗಿಸಿದ್ದರು. ಇದು ಶಿಶುಹತ್ಯೆ. ಮತ್ತೊಂದು ಹೃದಯ ವಿದ್ರಾವಕ ದೃಶ್ಯ. ಅಸಹಾಯಕರಾದ ಲಕ್ಷಾಂತರ ಕಂದಮ್ಮಗಳನ್ನು ಶೈಶಾವಸ್ಥೆಯಲ್ಲಿಯೇ ಕೊನೆಯುಸಿರು ಎಳೆಯುವಂತೆ ಈ ಕ್ರೂರಿ ಮನುಷ್ಯರು ಮಾಡಿದರು.
ನಿನ್ನ ಬಗ್ಗೆ ಮೊದಲಿನಿಂದಲೂ ತುಂಬಾ ಅನುಕಂಪ. ನಾನು ಉಪ ಕುಲಪತಿಯಾಗಿದ್ದಾಗ ನಮ್ಮ ವಿಶ್ವವಿದ್ಯಾಲಯದ ವಾಹನಗಳ ಚಾಲಕರು, ಕಂಡಕ್ಟರ್‌ಗಳು ಒಂದು ದಿನ ನನ್ನ ಆಫೀಸಿಗೆ ಬಂದರು. ಏನಪ್ಪಾ ವಿಷಯ ಅಂದೆ. ನಾಳೆ ಆಯುಧಪೂಜೆ ಸಾರ್ ಅಂದರು. ಎಂತೆಂತಹ ವಿದ್ಯಾವಂತರಿಗೆ, ವಿಜ್ಞಾನಿಗಳಿಗೆ ವೈಜ್ಞಾನಿಕ ಮನೋಭಾವದ ಅಭಾವವಿರುವುದರಿಂದ ಇವರಿಗೆ ವೈಚಾರಿಕ ಮನೋಭಾವವನ್ನು ಭೋಧಿಸುವುದು ಸರಿಯಲ್ಲವೆಂದು ನಾಲ್ಕು ಸೆಕೆಂಡ್ ಯೋಚನೆ ಮಾಡಿ. “ಆಯುಧಪೂಜೆ ಮಾಡಿಯಪ್ಪ. ಆದರೆ ನನ್ನದೊಂದು ಸಲಹೆ, ಎಲ್ಲಾ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಅವುಗಳಿಗೆಲ್ಲಾ ಸೇರಿ ಒಂದೇ ಒಂದು ಬೂದುಗುಂಬಳಕಾಯಿ ಒಡೆಯಿರಿ” ಎಂದೆ. ಅದಕ್ಕೆ ಅವರು ಏನು ಸಾರ್ ಹೀಗಂತೀರಿ. ಒಂದೊಂದು ವಾಹನಕ್ಕೂ ಒಂದೊಂದು ಬೂದುಗುಂಬಳಕಾಯಿ ಒಡದೇ ಆಕ್ಸಿಡೆಂಟ್‌ಗಳು ಕಡಿಮೆ ಆಗಲಿಲ್ಲ. ಅಂದ ಮೇಲೆ ಎಲ್ಲಾ ವಾಹನಗಳಿಗೂ ಸೇರಿ ಒಂದೇ ಒಂದು ಬೂದುಗುಂಬಳ ಕಾಯಿ ಒಡೆದರೆ ನಮ್ಮ ಗತಿ ಏನ್ ಸಾರ್? ಅಂತ ಹೇಳಿದರು. ಚರ್ಚಿಸಿ ಉಪಯೋಗವಿಲ್ಲವೆಂದು ಸರಿ, ಹಿಂದಿನಂತೆಯೇ ಆಯುಧಪೂಜೆ ಮಾಡಿ ಅಂದೆ. ಒಂದೊಂದು ವಾಹನಕ್ಕೂ ನಿನ್ನ ವಂಶದ ಒಬ್ಬೊಬ್ಬರನ್ನು ಬಲಿ ಕೊಟ್ಟರು. ಆ ಪಾಪದಲ್ಲಿ ನಾನೂ ಭಾಗಿಯಾದೆ.
ನಿನ್ನನ್ನು ಹೀಗೆ ಆಯುಧಪೂಜೆ ದಿನ ಬೀದಿಯಲ್ಲಿ ಕೊಲೆ ಮಾಡುವುದರಿಂದ ಅಪಘಾತಗಳು ಕಡಿಮೆ ಆಗುವುದಿಲ್ಲ ಎಂದು ಹಲವು ದಶಕಗಳಿಂದ ಬಡುಕೋತ ಇದ್ದೀನಿ. ಯಾರೂ ಇಲ್ಲಿಯ ತನಕ ಜಗ್ಗಿಯೇ ಇಲ್ಲ.
ಈಗಿನ ಶಿಕ್ಷಣಪದ್ದತಿಯಿಂದ, ವಿಜ್ಞಾನದ ಬೆಳವಣಿಗೆಯಿಂದ ಇಂತಹ ಅರ್ಥವಿಲ್ಲದ ನಂಬಿಕೆಗಳನ್ನು ಸಾಕಷ್ಟು ಕಡಿಮೆ ಮಾಡಲು ಆಗಿಲ್ಲ. ಹೇಳಿಕೊಳ್ಳುವಂತಹ ಸಮಾಜ ಸುಧಾರಣೆ ಆಗಿಲ್ಲ. ವಿಜ್ಞಾನದ ಪಾಡಿಗೆ ವಿಜ್ಞಾನ. ಮೂಡನಂಬಿಕೆಗಳ ಪಾಡಿಗೆ ಮೂಢನಂಬಿಕೆಗಳು.
ನಮ್ಮ ದೇಶದಲ್ಲಿ ಅಸಂಖ್ಯಾತ ದೇವಸ್ಥಾನಗಳು, ಅವ್ಯಾಹತವಾಗಿ ಪೂಜೆ, ಪುಣ್ಯಕ್ಷೇತ್ರಗಳಲ್ಲಿ ಕೋಟ್ಯಾಂತರ ರೂಪಾಯಿಗಳ ಕಾಣಿಕೆ ಅರ್ಥಾತ್ ದೇವರಿಗೆ ಲಂಚ. ಲಕ್ಷಾಂತರ ಮಂದಿ ಗಂಗಾನದಿಯಲ್ಲಿ, ಉಳಿದ ಪುಣ್ಯನದಿಗಳಲ್ಲಿ ಆಗಾಗ ಸ್ನಾನ. ವರ್ಷವೆಲ್ಲಾ ವಾರಕ್ಕೊಂದು ಸಲ ಲಕ್ಷಾಂತರ ಮಂದಿಯಿಂದ ದೂರದರ್ಶನದಲ್ಲಿ ರಾಮಾಯಣ ವೀಕ್ಷಣೆ. ಈಗ ಮಹಾಭಾರತ ಮೊದಲಾಗಿದೆ. ಇವು ಯಾವುವೂ ಜನರ ಮನೋಭಾವವನ್ನು ಸರಿಯಾದ ದಿಕ್ಕಿನಲ್ಲಿ ಕಿಂಚಿತ್ತಾದರೂ ಬದಲಾಯಿಸಿಲ್ಲ. ಮಾಮೂಲಿ ಸ್ವಾರ್ಥ, ಅಪ್ರಾಮಾಣಿಕತೆ, ಸಮಾಜಘಾತಕ ಕೃತ್ಯಗಳು, ಮೋಸ, ದಗಾ ಜೊತೆ ಜೊತೆಯಲ್ಲಿಯೇ ಸಾಗುತ್ತಿವೆ. ನಿತ್ಯಜೀವನದ ಮೇಲೆ ಧರ್ಮವು ಪ್ರಭಾವ ಬೀರಿಲ್ಲ. ವಿಜ್ಞಾನವೂ ಬೀರಿಲ್ಲ. ಧರ್ಮ ಲೇವಾದೇವಿಯಾಗಿದೆ. ವಿಜ್ಞಾನ ಕೇವಲ ಜೀವನೋಪಾಯ ಆಗಿದೆ.
ಇಷ್ಟು ದಿನ ಓದಿದವರಲ್ಲಿ ವಿಜ್ಞಾನಿಗಳಲ್ಲಿ ಯಾರಾದರೂ ಒಬ್ಬರು ಹೇಳಲಿ ಮೊಟ್ಟಮೊದಲನೆಯದಾಗಿ ಯಾವುದೇ ಬಲಿಯಿಂದ ಏನು ಪ್ರಯೋಜನ? ಪ್ರಯೋಜನವಿದ್ದರೆ ನಿನ್ನನ್ನೇ ಏಕೆ ಬಲಿ ಕೊಡಬೇಕು? ಇದನ್ನು ಸಮಂಜಸವಾಗಿ ಉತ್ತರಿಸುವ ಭೂಪ ಇನ್ನೂ ಹುಟ್ಟಿಲ್ಲ. ನಿನಗೆ ಆಗದವನು ಯಾವನೋ ನಿನ್ನನ್ನು ಮೊದಲು ಬಲಿ ಕೊಟ್ಟಸರಿ. ಅಲ್ಲಿಂದ ಮೊದಲಾಯಿತು ಈ ಅಸಂಖ್ಯಾತ ವಾರ್ಷಿಕ ಭೀಕರ ಕೊಲೆಗಳು.
ನಿನ್ನನ್ನು ಹೀಗೆ ಅಮಾನುಷವಾಗಿ ಕೊಲೆ ಮಾಡುವುದನ್ನು ಸ್ನೇಹಿತರೊಂದಿಗೆ ಖಂಡಿಸುತ್ತಿದ್ದೆ. ಭಾಷಣಗಳಲ್ಲೂ ಅದೇ ಕೆಲಸ ಮಾಡುತ್ತಿದ್ದೆ. ಈ ಸಲವಂತೂ ನೀನು ಮತ್ತು ನಿನ್ನ ವಂಶದ ಹಲವಾರು ಬೀದಿಯಲ್ಲಿ ಕೊಲೆಗೀಡಾದ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ನೋಡಿ ದುಃಖ ತಡೆಯಲಾರದೇ ನಿನಗೆ ಈ ಕಾಗದವನ್ನು ಬರೆದಿದ್ದೇನೆ. ನೀನು ಓದಲು ಆಗದೇ ಇರಬಹುದು. ಆದರೆ ನಿನಗೆ ಬರೆದ ಪತ್ರವನ್ನು ಬಹಿರಂಗಪಡಿಸುವುದರಿಂದ ನಿನ್ನ ಕೊಲೆಪಾತಕರಾದರೂ ಇದನ್ನೂ ಓದಿ ನಿನ್ನನ್ನು ಇಂತಹ ದುರ್ಗತಿಗೆ ಈಡು ಮಾಡದೇ ಹೋಗಲಿ ಎಂದು ಬರೆದಿದ್ದೇನೆ.
ನಾನು ಇಷ್ಟು ಮಾತ್ರ ನಿನಗೆ ಆಶ್ವಾಸನೆ ಕೊಡುತ್ತೇನೆ. ನಿನ್ನನ್ನು ಕೊಲೆಗೀಡು ಮಾಡುತ್ತಿರುವಂತಹ ಅಸಂಖ್ಯಾತ ಮೂಢನಂಬಿಕೆಗಳ, ಅರ್ಥವಿಲ್ಲದ ಸಂಪ್ರದಾಯಗಳ ವಿರುದ್ಧ ಒಬ್ಬನೇ ಆದರೂ ಚಿಂತೆ ಇಲ್ಲ, ಎದೆ ಗುಂದದೆ ಕೊನೆಯತನಕ ಹೋರಾಡುತ್ತಲೇ ಇರುತ್ತೇನೆ.
ಬದುಕಿರುವಾಗ ದೇಹಕ್ಕೆ ಮನಸ್ಸಿಗೆ ಸಾಕಷ್ಟು ಕಷ್ಟಕೊಟ್ಟು ಸತ್ತಾಗ ಆತ್ಮಕ್ಕೆ ಆಂತಿ ಸಿಗಲಿ ಎಂದು ಕೋರುವ ಜನ ನಾವು. ನಿನ್ನ ದೇಹಕ್ಕೆ ಮತ್ತು ಮನಸ್ಸಿಗೆ ಅಸಾಧ್ಯ ನೋವಾಗಿದೆ ಎಂದು ನನಗೆ ಚೆನ್ನಾಗಿ ಗೊತ್ತು. ಗೊತ್ತಿಲ್ಲದ ಆತ್ಮದ ಬಗ್ಗೆ ನಾನು ಏನನ್ನೂ ಹೇಳಲೂ ಇಚ್ಚಿಸುವುದಿಲ್ಲ.
ಇತಿ,
ನಿನ್ನ ವಂಶದ ಶ್ರೇಯೋಭಿಲಾಷಿ
ಎಚ್.ನರಸಿಂಹಯ್ಯ
(ಕೊನೆಯ ನಮ್ಮ ಇದು ಸಾಮಾಜಿಕ ಜಾಲತಾಣದ ಮೂಲೆಯಲ್ಲಿದ್ದ ಬರಹ )