Site icon TUNGATARANGA

ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಬಂದಿದ್ದ ಆನೆ ನೇತ್ರಾವತಿ ಮರಿಗೆ ಜನ್ಮ | ಆನೆಯ ಬದಲು ವಾಹನದಲ್ಲಿ ಚಾಮುಂಡೇಶ್ವರಿ ಪುತ್ಥಳಿ ಮೆರವಣಿಗೆ

ಶಿವಮೊಗ್ಗ: ಇಲ್ಲಿನ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಕ್ರೆಬೈಲಿನ ಆನೆ ನೇತ್ರಾವತಿ ಹೆಣ್ಣು ಮರಿಗೆ ಜನ್ಮ ನೀಡಿದೆ. ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳ ತಂಡ ಬೀಡುಬಿಟ್ಟಿತ್ತು. ಅಲ್ಲಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಮತ್ತು ಮರಿ ಆರೋಗ್ಯವಾಗಿವೆ.


ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಸಕ್ರೆಬೈಲಿನ ಆನೆ ಬಿಡಾರದಿಂದ ಮೂರು ಆನೆಗಳನ್ನು ಕರೆತರಲಾಗಿತ್ತು. ರಾತ್ರಿ ನೇತ್ರಾವತಿ (೨೭) ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಮತ್ತು ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದರು.
ಆರೋಗ್ಯ ಪರೀಕ್ಷೆಯಲ್ಲಿ ಗೊತ್ತಾಗಿರಲಿಲ್ಲ:


ನೇತ್ರಾವತಿ ಆನೆ ಗರ್ಭಿಣಿ ಅನ್ನುವುದು ಸಕ್ರೆಬೈಲು ಬಿಡಾರದ ಸಿಬ್ಬಂದಿ, ವೈದ್ಯರಿಗೆ ಗೊತ್ತಿರಲಿಲ್ಲ. ಮೈಸೂರು ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭ ನೇತ್ರಾವತಿ ಆನೆಯ ಆರೋಗ್ಯ ಪರೀಕ್ಷೆ ಮಾಡಿಸಲಾಗಿತ್ತು. ಆಗ ನೇತ್ರಾವತಿ ಆನೆ ಗರ್ಭಿಣಿ ಆಗಿರುವುದು ಗೊತ್ತಾಗಿರಲಿಲ್ಲ. ಶಿವಮೊಗ್ಗ ದಸರಾ ಹಿನ್ನೆಲೆ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ. ಶಿವಮೊಗ್ಗಕ್ಕೆ ಮೂರು ದಿನಗಳ ಹಿಂದೆ ನೇತ್ರಾವತಿಯನ್ನು ಕರೆತರಲಾಗಿತ್ತು. ಇಲ್ಲಿ ಜಂಬೂ ಸವಾರಿಯ ತಾಲೀಮು ನಡೆಸಲಾಗಿತ್ತು. ಅಂತಿಮ ಹಂತದ ತಾಲೀಮು ಕೂಡ ನಡೆದಿತ್ತು. ತಾಲೀಮು ಮುಗಿಸಿ ವಾಸವಿ ಶಾಲೆ ಆವರಣಕ್ಕೆ ತೆರಳಿದ ಬಳಿಕ ಮರಿಗೆ ಜನ್ಮ ನೀಡಿದೆ.


’ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ನವರಾತ್ರಿ ಸಂದರ್ಭ ಹೆಣ್ಣು ಮರಿಗೆ ಜನ್ಮ ನೀಡಿರುವು ಖುಷಿಯ ವಿಚಾರ. ಈ ಆನೆಯನ್ನು ಮೆರವಣಿಗೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಆನೆಗಳನ್ನು ಕ್ಯಾಂಪ್‌ಗೆ ವಾಪಸ್ ಕರೆದೊಯ್ಯಲಿದ್ದೇವೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ತಿಳಿಸಿದರು.


’ತಾಯಿ ಮತ್ತು ಮರಿಯ ಪರೀಕ್ಷೆ ಮಾಡಿದ್ದೇವೆ. ಮರಿ ೮೦ ಕೆ.ಜಿ ತೂಕ ಇದೆ. ಯಾವುದೇ ಆನೆ ಮರಿ ಹಾಕಿದಾಗ ಮತ್ತೊಂದು ಹೆಣ್ಣಾನೆ ಜೊತೆಗಿರಬೇಕು. ಹೇಮಾವತಿ ಆನೆ ಕೂಡ ಕರೆತಂದಿದ್ದೇವೆ. ಅದು ಕೂಡ ಈಗ ಜೊತೆಯಲ್ಲಿದೆ. ಈಗ ಮರಿ ಹಾಲು ಕುಡಿಯುತ್ತಿದೆ’ ಎಂದು ಸಕ್ರೆಬೈಲು ಆನೆ ಬಿಡಾರದ ವೈದ್ಯ ಡಾ.ವಿನಯ್ ತಿಳಿಸಿದರು.


ನೇತ್ರಾವತಿ ಈಗ ಐದನೇ ಬಾರಿಗೆ ಮರಿ ಹಾಕಿದೆ. ಇದರೊಂದಿಗೆ ಸಕ್ರೆಬೈಲಿನ ಬಿಡಾರದಲ್ಲಿ ಆನೆಗಳ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ.

Exit mobile version