ಶಿವಮೊಗ್ಗ: ಶಿವಮೊಗ್ಗ ದಸರಾ ಹಿನ್ನಲೆಯಲ್ಲಿ ನಗರದಾದ್ಯಂತ ಸಂಭ್ರಮ ಸಡಗರದ ವಾತಾವರಣ ಕಂಡುಬಂದಿದೆ.
ದಸರಾ ಹಬ್ಬದ ಅಂಗವಾಗಿ ೯ ದಿನ ಗಳ ಕಾಲ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರೈತ ದಸರಾ, ಯುವ ದಸರಾ, ರಂಗ ದಸರಾ, ಪರಿಸರ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಈಗ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಗೆ ಸಕಲ ಸಿದ್ಧತೆ ನಡೆದಿದೆ.
ನಗರದಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಕೊನೆಯ ದಿನವಾದ ಅ.೨೪ರಂದು ಬೆಳ್ಳಿ ಮಂಟಪ ದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ.
ಅಂಬಾರಿ ಮೆರವಣಿಗೆಯು ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ಹೊರಟು, ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿ ಗುಡಿ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್, ವಿನೋಬನಗರದ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ.
ಶ್ರೀ ಚಾಮುಂಡೇಶ್ವರಿ ದೇವಿ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಯು ಫ್ರೀಡಂ ಪಾರ್ಕ್ ತಲುಪಿದ ಬಳಿಕ ೬.೩೦ಕ್ಕೆ ಅಂಬು ಛೇದನ ಮಾಡುವ ಮೂಲಕ ಮುಡಿಯುವ ಉತ್ಸವಕ್ಕೆ ತಹಸೀಲ್ದಾರ್ ಚಾಲನೆ ನೀಡಲಿದ್ದಾರೆ.
ಬನ್ನಿ ಮುಡಿದ ಬಳಿಕ ಅತ್ಯಾಕರ್ಷಕ ಪಟಾಕಿಗಳನ್ನು ಸಿಡಿಸಲಿದ್ದು, ರಾವಣ ದಹನ ಕೂಡ ನಡೆಯಲಿದೆ. ಚಾಮುಂ ಡೇಶ್ವರಿ ದೇವಿಯ ಜಂಬೂ ಸವಾರಿಯಲ್ಲಿ ಮಂಗಳವಾದ್ಯ, ಡೊಳ್ಳು ಕುಣಿತ, ಚಂಡೆ ಮದ್ದಳೆ, ತಟ್ಟೆರಾಯ, ಯಕ್ಷಗಾನ, ಕೀಲುಕುದುರೆ ನೃತ್ಯ, ನಗಿಸುವ ಗೊಂಬೆಗಳ ಕುಣಿತ, ವೀರಗಾಸೆ, ಕಥಕ್ಕಳಿ ನೃತ್ಯ ಸೇರಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.
ಮೇಯರ್ ಎಸ್. ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ ಡಿಸಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿರುವರು.
ವಿದ್ಯುತ್ ದೀಪ ಅಲಂಕಾರ :
ವಿಜಯದಶಮಿ ಹಿನ್ನೆಲೆಯಲ್ಲಿ ಮೂರು ದಿನಗಳಿಂದಲೇ ನಗರದಲ್ಲೆಡೆ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಬೆಕ್ಕಿನ ಕಲ್ಮಠದಿಂದ ಮೀನಾಕ್ಷಿ ಭವನ ರಸ್ತೆ, ಕರ್ನಾಟಕ ಸಂಘ, ಅಮೀರ್ ಅಹಮ್ಮದ್ ವೃತ್ತ, ಅಶೋಕ ವೃತ್ತದವರೆಗೆ, ನೆಹರು ರಸ್ತೆಯಿಂದ ಸೀನಪ್ಪ ಶೆಟ್ಟಿ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ಪೊಲೀಸ್ ಫ್ರೀಡಂ ಪಾರ್ಕ್‌ವರೆಗೆ, ಚೌಕಿ ಯಿಂದ ಉಷಾ ನರ್ಸಿಂಗ್ ಹೋಂವರೆಗೆ, ಬೆಕ್ಕಿನ ಕಲ್ಮಠದಿಂದ ಆಂಜನೇಯ ದೇವ ಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯರಸ್ತೆ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಶಿವಮೂರ್ತಿ ವೃತ್ತದಿಂದ ಮಹಾವೀರ ವೃತ್ತ, ಗಾಂಧಿ ಪಾರ್ಕ್‌ವರೆಗೆ ಕೋಟೆ ಆಂಜನೇ ಯಸ್ವಾಮಿ ಹರಕೆರೆ ಕಾಳಿಕಾಂಬಾ ದೇವಸ್ಥಾನವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.