Site icon TUNGATARANGA

” ಕಾಳ ರಾತ್ರಿ”ದೇವಿ “ಪೂಜೆಯ ಪ್ರಾಮುಖ್ಯತೆ “ಪೂಜಾ ವಿಧಾನ ಕುರಿತು ಲೇಖಕ ರಾ.ಹ. ತಿಮ್ಮೇನಹಳ್ಳಿ ಬರಹ

 ಏಳನೇ ದಿನ ಆರಾಧಿಸುವ ದುರ್ಗೆಯ ಏಳನೇ ಶಕ್ತಿಯೇ” ಕಾಳ ರಾತ್ರಿ”. ಕಾಳ ಎಂದರೆ ಸಮಯ ಹಾಗೂ ಸಾವು ಎಂಬುದರ ಸೂಚಕ, ಕಾಲ ರಾತ್ರಿಯೂ ಕಾಲದ ಸಾವು ಎಂಬುದನ್ನು ಹೇಳುತ್ತದೆ.ತಾಯಿ ಕಾಳ ರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ, ಬೆಳಕೆಂಬ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ.ತಾಯಿಯು ಕತ್ತಲೆಯನ್ನು ಪ್ರತಿನಿಧಿಸುತ್ತಾಳೆ.ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ,ಅದೇ ರೀತಿ ಮನುಷ್ಯನ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ ಶಾಂತಿ ಧೈರ್ಯವನ್ನು ತುಂಬುತ್ತಾಳೆ.

    ಅತ್ಯಂತ ಭಯಂಕರವಾದ ಸ್ವರೂಪ ವುಳ್ಳವರಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭಫಲವನ್ನೇ ಕಳಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರಿ ಎಂದು ಪೂಜಿಸುತ್ತಾರೆ. ದಟ್ಟವಾದ ಅಂಧಾಕಾರದಂತೆ ಇವಳ ಶರೀರದ ವರ್ಣವು ಕಪ್ಪು ತಲೆಗೂದಲು, ಬಿಚ್ಚಿ ಹರಡಿಕೊಂಡಿದೆ, ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ,ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲ ವಾಗಿದ್ದು, ವಿದ್ಯುತ್ತಿನಂತೆ ಕಿರಣಗಳನ್ನು ಹೊಮ್ಮಿಸುತ್ತಿವೆ. ಕತ್ತೆಯ ಮೇಲೆ ಕುಳಿತಿರುತ್ತಾಳೆ, ಆಕೆಗೆ ನಾಲ್ಕು ಕೈಗಳಿವೆ, ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಮತ್ತೊಂದರಲ್ಲಿ ಕಬ್ಬಿಣದ ಮುಳ್ಳು ಹಿಡಿದಿರುತ್ತಾಳೆ, ಬಲ ಗಡೆಯ ಎರಡೂ ಕೈಗಳಲ್ಲಿ ವರಮುದ್ರೆ ಹಾಗೂ ಅಭಯ ಮುದ್ರೆಯನ್ನು ಹೊಂದಿದ್ದಾಳೆ

Click

  “ಕಾಳ ರಾತ್ರಿಯ ಪೂಜಾ ವಿಧಾನ “: ನವರಾತ್ರಿಯ ಏಳನೇ ದಿನವೂ ವ್ಯಕ್ತಿಯು ಕಾಳರಾತ್ರಿಯ ಪೂಜೆ ನೆರವೇರಿಸಿದರೆ, ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ತಾಯಿಯ ವಿಗ್ರಹವನ್ನು ಚೆನ್ನಾಗಿ ತೊಳೆದು ಹಾಲು,ಮೊಸರು, ಸಕ್ಕರೆ, ಜೇನುತುಪ್ಪ ಹಚ್ಚಿ ಕೊನೆಯಲ್ಲಿ ಎಲೆ, ಅಡಿಕೆಯನ್ನು ಅರ್ಪಿಸಬೇಕು. ತಾಯಿಗೆ ಪುಷ್ಪಾರ್ಚನೆ ಮಾಡಿ,ಕುಂಕುಮ, ಅಕ್ಷತೆ ಮತ್ತು ಗಂಧವನ್ನು ಅರ್ಪಿಸಿ, ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಬತ್ತು ಅವತಾರಗಳನ್ನು ನೆನೆದು ಪೂಜೆ ಮಾಡಿ, ತಾಯಿಗೆ ಅರ್ಪಿಸುವ ಪ್ರಸಾದವು ಹಾಲು ಜೇನು ತುಪ್ಪವನ್ನು ಒಳಗೊಂಡಿರಲಿ,ಪಾಯಸವು ಶ್ರೇಷ್ಠ, ತಾಯಿಯ ಹಣೆಗೆ ಕುಂಕುಮ ಇಟ್ಟು ಮನಃಸ್ಪೂರ್ತಿಯಾಗಿ ಪೂಜಿಸಿ,ತಾಯಿ ಕಾಲ ರಾತ್ರಿಯನ್ನು ಪೂಜಿಸಲು “ಓಂ ದೇವಿ ಕಾಳರಾತ್ರಿಯೇ ನಮಃ “ಎಂದು ಮಂತ್ರ ಪಠಿಸಿ.

      ದುಃಖ,ನೋವು,ವಿನಾಶ ಮತ್ತು ಸಾವನ್ನು ಎಂದಿಗೂ ತಪ್ಪಿಸಲಾಗದು, ಇವು ಜೀವನದ ಕಹಿ ಸತ್ಯಗಳು ಮತ್ತು ಅವುಗಳನ್ನು ನಿರಾಕರಿಸುವುದು ಅಸಾಧ್ಯ ಎಂಬುದನ್ನು ತಾಯಿ ಅರ್ಥ ಮಾಡಿಸುತ್ತಾಳೆ, ತಾಯಿ ಕಾಲರಾತ್ರಿ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ,ಧೈರ್ಯ ತುಂಬಿಕೊಳ್ಳುತ್ತದೆ, ಕಾಲರಾತ್ರಿಯ ಪೂಜಾ ಮಂತ್ರಗಳು ಭಕ್ತರನ್ನು ಕಷ್ಟಕಾಲದಲ್ಲಿ ಕಾಪಾಡುತ್ತದೆ. ಮತ್ತು ಯಾವತ್ತೂ ಸೋಲದಂತೆ ಕಾಯುತ್ತದೆ,ಶನಿ ಅಥವಾ ನಮಗೆ ಯಾವುದೇ ಗ್ರಹಪೀಡೆ ಗಳಿದ್ದರೆ ತಾಯಿ ಕಾಲರಾತ್ರಿ ಪೂಜೆಯಿಂದ ನಿವಾರಣೆಯಾಗುತ್ತದೆ. ನವರಾತ್ರಿಯ ಏಳನೇ ದಿನದಂದು ನೀಲಿಬಣ್ಣದ ವಸ್ತ್ರ ಧರಿಸುವುದರಿಂದ ತಾಯಿಗೆ ಸಂತೋಷವಾಗುತ್ತದೆ, ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

“ಕಾಳ ರಾತ್ರಿಯ ಕಥೆ”: ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ತಾಯಿ ದುರ್ಗೆಯು ಕಾಳ ರಾತ್ರಿಯಾಗಿ ರೂಪ ಧಾರಣೆ ಮಾಡಿ,ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಹೊತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುವಳು. ಕಾಲ ರಾತ್ರಿಯೂ ಕಪ್ಪು ಹಾಗೂ ವಿಚಿತ್ರವಾಗಿ ಕಾಣಿಸುವರು,ಆಕೆ ಎಲ್ಲಾ ರೀತಿಯ ದುಷ್ಟ ಶಕ್ತಿ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುವರೂ ಅದಾಗ್ಯೂ, ಆಕೆ ತನ್ನ ಭಕ್ತರಿಗೆ ವರ ನೀಡಿ ರಕ್ಷಿಸುವರು, ಆಕೆ ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವಳು, ಇದರಿಂದಾಗಿ ಆಕೆಯನ್ನು ಶುಭಂಕರಿ ಎಂದು ಕರೆಯುವರು.

 “ಪೂಜೆಯ ಪ್ರಾಮುಖ್ಯತೆ ” ತಾಯಿ ಕಾಳ ರಾತ್ರಿಯು ಶನಿ ಗ್ರಹದ ಅಧಿಪತಿ,ಆಕೆ ಜನರು ಮಾಡಿರುವ ಕೆಡಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವಳು, ಆಕೆ ದುಷ್ಟತನವನ್ನು ಶಿಕ್ಷಿಸಿ, ಒಳ್ಳೆಯತನವನ್ನು ರಕ್ಷಿಸುವವರು, ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು, ತಾಯಿ ಕಾಳ ರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇ ಸಾತಿ ಪ್ರಭಾವ ತಗ್ಗಿಸಬಹುದು.

         ಮಲ್ಲಿಗೆ ಹೂವು ಕಾಳ ರಾತ್ರಿಗೆ ಅರ್ಪಿಸಲು ಅತ್ತ್ಯುತ್ತಮವಾಗಿರುವ ಹೂವು ಶ್ರದ್ಧಾ ಭಕ್ತಿಯಿಂದ ನವರಾತ್ರಿಯ ಏಳನೇ ದಿನ ದಿಂದ ತಾಯಿ ಕಾಲರಾತ್ರಿಯ ಪೂಜೆ ಮಾಡಬೇಕು.ಗಣಪತಿ ಪೂಜೆಯ ಬಳಿಕ ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು.

    ನವರಾತ್ರಿಯ ಏಳನೇ ದಿನ ರಾತ್ರಿ ತಂತ್ರ ಸಾಧಕರು ಮತ್ತು ಯೋಗಿಗಳಿಗೆ ಅತ್ಯಂತ ಶುಭವಾಗಿರುತ್ತದೆ. ಧ್ಯಾನದಲ್ಲಿ ಮಗ್ನರಾಗುವ ಅವರು ಎಲ್ಲಾ ಚಕ್ರಗಳಿಗೆ ಅಗ್ರಗಣ್ಯವಾದ ಸಹಸ್ರ ಚಕ್ರವವನ್ನು ಸಾಧಿಸುತ್ತಾರೆ. ಈ ಚಕ್ರವು ಮಾನವ ಜಾಗೃತಿಯ ವಿಕಾಸದ ಕೊನೆಯ ಮೈಲುಗಲ್ಲೇ ಎಂದು ಹೇಳಲಾಗುತ್ತದೆ.

   ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

Exit mobile version