Site icon TUNGATARANGA

UPSC ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳ್ಳುವ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದ್ದೇನು ? ಸಂಪೂರ್ಣ ವಿವರಕ್ಕಾಗಿ ಲಿಂಕ್ ಬಳಸಿ

ಶಿವಮೊಗ್ಗ: ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುವ ಅಭ್ಯರ್ಥಿಗಳಲ್ಲಿ ನಿಖರವಾದ ಗುರಿ ಇರಬೇಕು ಮತ್ತು ಸುತ್ತಲಿನ ಜೊತೆಗಾರರನ್ನು ಮೊದಲು ನಮ್ಮ ಸಾಧನೆಗೆ ಪೂರಕವಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಗುರಿ ತಲುಪಲು ಕಷ್ಟವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದ್ದಾರೆ.


ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆಯ ಜ್ಞಾನದಸರಾ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮನ್ವಯ ಟ್ರಸ್ಟ್ ಶಿವಮೊಗ್ಗ ವತಿಯಿಂದ ಸಂಯೋಜಿಸಲ್ಪಟ್ಟ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪೂರ್ವಸಿದ್ಧತೆ ಬಗ್ಗೆ ತರಬೇತಿ ನೀಡುತ್ತವೆ. ಪಾಲಿಕೆಯ ಈ ಕಾರ್ಯಕ್ರಮ ಅತ್ಯಮೂಲ್ಯವಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.


ಪದವಿ ಮುಗಿದ ತಕ್ಷಣ ಕೆಲಸಕ್ಕೆ ಸೇರಲಿ ಎಂಬ ಅಭಿಪ್ರಾಯವನ್ನು ಕುಟುಂಬಸ್ಥರು ಮತ್ತು ನೆರೆಹೊರೆಯವರು ವ್ಯಕ್ತಪಡಿಸುತ್ತಾರೆ ಆದರೆ ನಿಮಗೆ ನಿರ್ದಿಷ್ಟ ಉನ್ನತ ಶಿಕ್ಷಣದ ಗುರಿ ಇದ್ದರೆ ನೀವು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದೆ ಸಂಬಂಧಪಟ್ಟ ಪುಸ್ತಕಗಳನ್ನು

ನಿರಂತರ ಓದುವುದರ ಮೂಲಕ ಯಶಸ್ಸು ಗಳಿಸಬಹುದು. ಪರೀಕ್ಷೆ ಬಂದಾಗ ಮಾತ್ರ ಪುಸ್ತಕ ಓದುವುದಲ್ಲ. ನಾವು ಯಾವ ಉದ್ದೇಶ ಇಟ್ಟುಕೊಂಡಿದ್ದೇವೆ ಮತ್ತು ಏನಾಗಬೇಕೆಂದು ತಿರ್ಮಾನ ಮಾಡಿದ್ದೇವೆ ಆ ವಿಷಯದ ಬಗ್ಗೆ ಹೆಚ್ಚಿನ ಓದುವಿಕೆ ಅವಶ್ಯವಿದೆ ಎಂದರು…


ಸಾಮೂಹಿಕ ಅಧ್ಯಯನಕ್ಕಿಂತ ನಮಗೆ ಪೂರಕ ವಾತಾವರಣ ಇರುವ ಕೆಲವೇ ಸ್ನೇಹಿತರ ಜೊತೆ ವಿಚಾರ ವಿನಿಮಯ ಮಾಡಿಕೊಂಡು ಓದುವುದು ಸೂಕ್ತ ಎಂಬುದು ನನ್ನ ಭಾವನೆ. ಸುತ್ತಲಿನ ಗೆಳೆಯರ ವಿಭಿನ್ನ ಅಭಿಪ್ರಾಯಗಳು ಕೂಡ ಕೆಲವೊಮ್ಮೆ ನಮ್ಮ ಉದ್ದೇಶಕ್ಕೆ ಅಡ್ಡಿ ಬರುವ ಸಾಧ್ಯತೆ ಇರುತ್ತದೆ.

ಮೊದಲು ನಮ್ಮ ಮುಂದಿನ ಜೀವನದ ಬಗ್ಗೆ ಸೂಕ್ತ ಯೋಜನೆಗಳನ್ನು ಮಾಡಿ ಅದಕ್ಕೆ ಬೇಕಾದ ಯೋಚನೆಗಳನ್ನು ಮಾಡಬೇಕು ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ವಿವಿಧ ಕೋರ್ಸ್‌ಗಳು, ಗೌರವ ಧನದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದರು.


ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನವರಾತ್ರಿಯ ಶಾರದಾ ಪೂಜೆ ದಿನದಂದೇ ಜ್ಞಾನ ದಸರಾ ಹಮ್ಮಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ನೀಡುವ ವಿಶೇಷ ಆಲೋಚನೆಯನ್ನು ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಈ ಬಾರಿ ಹಮ್ಮಿಕೊಂಡಿದ್ದೇವೆ.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಳ್ಳೆಯ ನಾಯಕರು, ಅಧಿಕಾರಿಗಳು. ಒಳ್ಳೆಯ ಪ್ರಜೆಗಳಾಗಿ ದೇಶ ಕಟ್ಟುವಲ್ಲಿ ಕಾರ್ಯೋನ್ಮುಖರಾಗೋಣ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಕಾರಿಯಾಗಲಿ ಎಂದು ಹಾರೈಸಿದರು.


ವೇದಿಕೆಯಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಕಲಾದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರುಳೀಧರ್, ಪಾಲಿಕೆ ಸದಸ್ಯರಾದ ಮಂಜುನಾಥ್, ಆರತಿ ಆ.ಮಾ. ಪ್ರಕಾಶ್, ಸುವರ್ಣಾ ಶಂಕರ್, ಭಾನುಮತಿ ವಿನೋದ್‌ಕುಮಾರ್, ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ್ ಎಸ್., ಅಕ್ಷರ ದಾಮ್ಲೆ, ಸಯ್ಯದ್ ಸಾದತ್, ಬಾಬು ಸಂದೀಪ್, ಶಿವಮೊಗ್ಗ ಡಿಸಿಎಫ್ ಶಿವಶಂಕರ್ ಇ. ಪಾಲ್ಗೊಂಡಿದ್ದರು.

Exit mobile version