Site icon TUNGATARANGA

ಐಟಿ ರೇಡ್ ಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ| ಸ್ವತಃ ಭ್ರಷ್ಟರಾದ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತಾನಾಡುವುದು ನಾಚಿಕೆಗೇಡಿತನ : ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್

ಶಿವಮೊಗ್ಗ: ಬೆಂಗಳೂರಿನಲ್ಲಿ ನಡೆದ ಐಟಿ ರೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸ್ವತಃ ಭ್ರಷ್ಟರಾದ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿತನ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.


ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಕೆಲವು ಗುತ್ತಿಗೆದಾರರ ಮೇಲೆ ಐಟಿ ರೇಡ್ ಆಗಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಯಾವ ಸಂಬಂಧವೂ ಇಲ್ಲ. ಆದರೂ ಕೂಡ ಬಿಜೆಪಿ ನಾಯಕರು ಅರ್ಥವಿಲ್ಲದಂತೆ ಬಾಯಿಗೆ

ಬಂದಂತೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ ಈ ಆರೋಪ ಮಾಡುವವರೆಲ್ಲರೂ ಭ್ರಷ್ಟಾಚಾರಿಗಳೇ ಆಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ ಎಂದರು.


ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಹಗರಣಗಳು ಸಾಲುಸಾಲಾಗಿ ಬಂದಿವೆ. ಶೇ.೪೦ರ ಕಮಿಷನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಬಿಟ್‌ಕಾಯಿನ್ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳಾಗಿವೆ. ಅದರಲ್ಲು ಕೊರೋನಾ ಸಂದರ್ಭದಲ್ಲಂತೂ ಬಿಜೆಪಿಗರು ಹಂವನ್ನು ಕೊಳ್ಳೆ ಹೊಡೆದಿದ್ದಾರೆ.

ಅಂತ ಭ್ರಷ್ಟಾಚಾರಿಗಳು ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಐದು ತಿಂಗಳಾಗಿಲ್ಲ. ಆಗಲೇ ಆರೋಪದ ಮಾತನಾಡುತ್ತಾರೆ. ಯಾರೇ ಭ್ರಷ್ಟಾಚಾರ ಮಾಡಿದರೂ ಕೂಡ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದರು.


ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ. ಇದು ಸುಭದ್ರ ಸರ್ಕಾರವನ್ನು ಅಲ್ಲಾಡಿಸುವ ವ್ಯರ್ಥ ಪ್ರಯತ್ನವಾಗಿದೆ ಎಂದರು.


ಈಶ್ವರಪ್ಪನವರು ತಾವು ಭ್ರಷ್ಟಾಚಾರ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಅವರು ಅನೇಕ ಬಾರಿ ಮಾತನಾಡುವಾಗ ಕಾಂಗ್ರೆಸ್ಸಿಗರು ನಮಗಿಂತ ಹೆಚ್ಚು ಕಮಿಷನ್ ತೆಗೆದುಕೊಳ್ಳುತ್ತಾರೆ. ಅವರದ್ದು ಶೇ.೮೦ರಷ್ಟಾಗುತ್ತದೆ ಎಂದು ಹೇಳುತ್ತಲೇ ನಾವು ಶೇ.೪೦ರಷ್ಟು ಕಮಿಷನ್ ತಿಂದಿದ್ದು ನಿಜ ಎಂದು

ಒಪ್ಪಿಕೊಂಡಿದ್ದಾರೆ. ಮೊದಲು ಅವರನ್ನು ಬಂಧಿಸಬೇಕು. ಬಿಜೆಪಿ ಸರ್ಕಾರ ಇದ್ದಾಗಲೇ ಅವರು ಅಧಿಕಾರ ಕಳೆದುಕೊಂಡವರು. ಐಟಿ ರೇಡ್‌ಗೆ ಸಂಬಂಧಿಸಿದಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ ಎಂದರು.


ಜೆಡಿಎಸ್ ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಕುಮಾರಸ್ವಾಮಿ, ಇಬ್ರಾಹಿಂ ಅವರ ಪ್ರೇಮ ಪ್ರಸಂಗವಾಗಿದೆ. ಸದ್ಯದಲ್ಲಿಯೇ ಅದರ ವಿಚ್ಛೇದನ ಗೊತ್ತಾಗುತ್ತದೆ. ಇಬ್ರಾಹಿಂ ಅವರು ಇಂಡಿಯಾ ಟೀಮ್ ಅನ್ನು ಬೆಂಬಲಿಸುತ್ತಿರುವುದು ಸ್ವಾಗತಾರ್ಹ ಎಂದರು.


ಬಿಜೆಪಿ ಆಡಳಿತದ ಅವಧಿಯಲ್ಲಿ ಸಾವಿರ ಕೋಟಿ ಸಾಲ ಮಾಡಿದ್ದರು. ಅದನ್ನು ಈಗ ತೀರಿಸಬೇಕಾಗಿದೆ. ಕಾಮಗಾರಿಗಳ ಟೆಂಡರ್ ಕರೆಯುವ ವೇಳೆಯಲ್ಲಿ ಬಿಜೆಪಿಯ ನಾಯಕರು ಹಣವನ್ನು

ಕಬಳಿಸಿದ್ದಾರೆ. ಈಗ ಅಂತಿಮ ಬಿಲ್ ಮಾಡುವಾಗ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಈಗ ಕಾಂಗ್ರೆಸ್ ನಾಯಕರ ಮನೆಬಾಗಿಲು ತಟ್ಟುತ್ತಿದ್ದಾರೆ. ೫೦ ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ

ಸದಸ್ಯ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಚಂದ್ರಶೇಖರ್, ಕಲಗೋಡು ರತ್ನಾಕರ್, ಕಾಶಿ ವಿಶ್ವನಾಥ್, ಕಲೀಂ ಪಾಶಾ ಸೇರಿದಂತೆ ಹಲವರಿದ್ದರು.

Exit mobile version