ಶಿವಮೊಗ್ಗ: ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರು ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಅವರು ಇಂದು ಕೆಪಿಸಿಸಿ ವಕ್ತಾರರಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ಆಪರೇಷನ್ ಹಸ್ತ ಅಲ್ಲ. ಆದರೆ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೂ ಸೇರಿದಂತೆ ಅನೇಕ ಶಾಸಕರು,
ಮುಖಂಡರು ಕಾಂಗ್ರೆಸ್‌ಗೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಮುಖಂಡರ ಮನೆಗಳಿಗೂ ತೆರಳಿದ್ದಾರೆ. ಸದ್ಯದಲ್ಲಿಯೇ ಈ ವಿಷಯ ಬಹಿರಂಗವಾಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಆಂತರಿಕ ಸಮಸ್ಯೆಯಿಂದ ಬಳಲುತ್ತಿದೆ. ಸಾಂವಿಧಾನಿಕ ಸ್ಥಾನವಾದ ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಇದುವರೆಗೂ ವಿಪಕ್ಷವಾದ ಬಿಜೆಪಿಗೆ ತನ್ನ ವಿಪಕ್ಷ ನಾಯಕರನ್ನು ಆಯ್ಕೆಮಾಡಿಕೊಳ್ಳುವ ಯೋಗ್ಯತೆ ಇಲ್ಲದಂತಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ರನ್ನು ನೇಮಕ ಮಾಡಿಕೊಳ್ಳಲಾಗದ ಸ್ಥಿತಿಗೆ ಬಿಜೆಪಿ ತಲುಪಿದೆ ಎಂದರು.
ಶಿವಮೊಗ್ಗದ ಒಂದು ಸಣ್ಣ ಬಡಾವಣೆಯಲ್ಲಿ ನಡೆದ ಗಲಾಟೆಯನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ನಗರದಲ್ಲಿ ಶಾಂತಿ ನೆಲೆಸಿದೆ. ಆದರೆ ಶಿವಮೊಗ್ಗದಲ್ಲಿ ಪರಿಸ್ಥಿತಿ ಇಷ್ಟುಬೇಗ ತಣ್ಣಗಾಗಿದ್ದು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಇಷ್ಟವಾದಂತಿಲ್ಲ. ಅದಕ್ಕಾಗಿಯೇ ಈಗ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಲವತ್ತು ವರ್ಷದ ರಾಜಕೀಯ ಜೀವನದ ಅನುಭವ ಇರುವ ಅವರು ನಗರದಲ್ಲಿ ಶಾಂತಿ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಅವರಿಗೆ ಶೋಭೆಯಲ್ಲ. ರಾಜ್ಯದಲ್ಲಿ ಕಾವೇರಿ ನೀರಾವರಿ ಸಮಸ್ಯೆ ಇದೆ. ನೀರಾವರಿ ಸಚಿವರೂ ಆಗಿದ್ದ ಈಶ್ವರಪ್ಪ ಅವರು ಎಂದೆಂದಿಗೂ ನೀರಾವರಿ ಕುರಿತು ಮಾತನಾಡೇ ಇಲ್ಲ ಎಂದರು.
ಕಾವೇರಿ ವಿಷಯದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರನ್ನು ಮಧ್ಯ ಪ್ರವೇಶಿಸುವಂತೆ ಮಾಡಿ ರಾಜ್ಯದ ಹಿತ ಕಾಪಾಡುವಲ್ಲಿ ಅಂದಿನ ಸಚಿವ ಅನಂತಕುಮಾರ್ ಶ್ರಮವಹಿಸಿದ್ದರು. ರಾಜ್ಯದ ೨೬ ಬಿಜೆಪಿ ಸಂಸದರನ್ನಿಟ್ಟುಕೊಂಡು ಪ್ರಧಾನಮಂತ್ರಿಗಳನ್ನು ಕರೆತಂದು ಕಾವೇರಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ, ರೈತರ ಹಿತ ಕಾಯುವ ಕೆಲಸ ಮಾಡದ ಈಶ್ವರಪ್ಪ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಿ ರಾಜ್ಯದ ಹಿತದ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನ ಕೊಲೆಯಾಗಿದ್ದರೆ, ಡಿ.ಕೆ. ಶಿವಕುಮಾರ್ ಅವರ ತಮ್ಮನ ಕೊಲೆಯಾಗಿದ್ದರೆ ಎಂಬ ಬೇಜವಾಬ್ದಾರಿ ಮಾತುಗಳನ್ನು ಈಶ್ವರಪ್ಪ ನಿಲ್ಲಿಸಬೇಕು.
ಸಾಂವಿಧಾನಿಕ ಹುದ್ದೆಯಲ್ಲಿಲ್ಲದಿದ್ದರೂ ಪೈಲಟ್ ವಾಹನದ ಮುಂದಿಟ್ಟುಕೊಂಡು ಓಡಾಡಲು ಯಾವ ಅರ್ಹತೆ ಇದೆ ? ಅಧಿಕಾರ ಕಳೆದುಕೊಂಡ ತಕ್ಷಣ ದುಬೈನಿಂದ ಬೆದರಿಕೆ ಕರೆಗಳು ಬರುತ್ತವೆ. ಆ ತನಿಖೆ ಎಲ್ಲಿಗೆ ಬಂತು? ಸೈರನ್ ಹೊಡ್ಕೊಂಡ್ ಹೋಗುವುದಕ್ಕಿಂತ ಸದ್ದಿಲ್ಲದೆ ಓಡಾಡೋದು ಒಳ್ಳೆಯದು. ಕತ್ತಿ ಕೊಡುವುದಿದ್ದರೆ ಬಿಜೆಪಿ ಮುಖಂಡರು ತಮ್ಮ ಮಕ್ಕಳ ಕೈಗೆ ಕತ್ತಿ ಕೊಟ್ಟು ಬೀದಿಗೆ ಬಿಡಲಿ, ಕಾನೂನು ಏನು ಮಾಡುತ್ತೆ ಅನ್ನೋದು ಗೊತ್ತಾಗುತ್ತೆ ಎಂದ ಆಯನೂರು ಮಂಜುನಾಥ್ ಅವರ ಇಂತಹ ಸಣ್ಣತನದ ರಾಜಕಾರಣವನ್ನು ಬಿಡಬೇಕು ಎಂದು ಈಶ್ವರಪ್ಪ ಅವರಿಗೆ ಕಿವಿಮಾತು ಹೇಳಿದರು.