Site icon TUNGATARANGA

ನವರಾತ್ರಿ ನವದುರ್ಗೆಯರ ಆರಾಧನೆ ವೈಶಿಷ್ಟತೆ” ಆಚರಣೆಯ ಮಹತ್ವದ ಬಗ್ಗೆ ಶಿಕ್ಷಕ ರಾ. ಹ. ತಿಮ್ಮೇನಹಳ್ಳಿ,ರವರ ಬರಹ ಒಮ್ಮೆ ಓದಿ

        ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿ ವರೆಗೆ ನಡೆಯುವ ನಾಡಹಬ್ಬವೇ ನವರಾತ್ರಿ. ಈ ಹಬ್ಬವನ್ನು ಭಾರತದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ದುರ್ಗಾಪೂಜಾ,  ರಾಮಲೀಲಾ,  ದೇವಿ ಪೂಜಾ,  ನಾಡಹಬ್ಬ ಇತ್ಯಾದಿ ಹೆಸರಿನಿಂದ ಆಚರಿಸಲಾಗುತ್ತದೆ.

       ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆ ಮಾಡುವುದು ಹಿಂದೂ ಸಂಪ್ರದಾಯ. ಶಕ್ತಿ ದೇವತೆಯ ಆರಾಧನೆ ಮಾಡುವುದರಿಂದ ದುಷ್ಟಶಕ್ತಿಗಳ ದಮನ ಮಾಡುವ ಸಾಮರ್ಥ್ಯವನ್ನು ತಾಯಿ ಕರುಣಿಸುತ್ತಾಳೆ ಅನ್ನೋದು ನಂಬಿಕೆ. ಅಕ್ಟೋಬರ್ 15 ಭಾನುವಾರದಿಂದ ವಿಜಯದಶಮಿಯ ವರೆಗೂ  ನವರಾತ್ರಿಯ ನವ ದುರ್ಗೆಯರ  ಪೂಜೆ-ಪುನಸ್ಕಾರಗಳು ಆರಂಭ ಆಗಲಿವೆ. ನವ ದೇವಿಯರ ಒಂಬತ್ತು ರೂಪಗಳ ವಿಶೇಷತೆ ಏನು? 9 ದಿನ ಜಗನ್ಮಾತೆಯನ್ನು  ಪೂಜಿಸುವುದು ಹೇಗೆ? 

       ನವರಾತ್ರಿಯಲ್ಲಿ ನವದುರ್ಗೆಯರ ಪೂಜೆ,  ನವರಾತ್ರಿಯ ಒಂಬತ್ತು ದಿನ ದುರ್ಗೆಯ ಒಂಬತ್ತು ರೂಪಗಳ ಪೂಜೆ. ನವರಾತ್ರಿಯ ಪ್ರಥಮದಿನ ಶೈಲಪುತ್ರಿಯ ಪೂಜೆ. ಎಲ್ಲೆಲ್ಲೂ ನವರಾತ್ರಿಯ ಸಂಭ್ರಮ,  ಶಕ್ತಿ ದೇವತೆಯ ಆರಾಧನೆ, ದುರ್ಗಾಪೂಜೆ,  ಪಾರಾಯಣ, ನಿತ್ಯ ದುರ್ಗೆ ಯರನ್ನು  ಹಾಡುವ ಕೊಂಡಾಡುವ ನವರಾತ್ರಿಯಲ್ಲಿ ದೇವಿಯ ಒಲುಮೆಗೆ ಪಾತ್ರವಾಗುವ ಸುಸಂದರ್ಭವಿದು,   ಶರನ್ನವ ರಾತ್ರಿಯ ದಿನ,  ಒಂದೊಂದು ದಿನ ಒಂದೊಂದು  ಶಕ್ತಿದೇವತೆಯ ಆರಾಧನೆಯನ್ನು ಮಾಡಲಾಗುತ್ತದೆ. ಶೈಲಾ ಪುತ್ರಿ,  ಬ್ರಹ್ಮಚಾರಿಣಿ, ಚಂದ್ರಘಂಟಾ,  ಕೂಷ್ಮಾಂಡಾ, ಕಾತ್ಯಾಯಿನಿ,  ಕಾಳ ರಾತ್ರಿ, ಮಹಾಗೌರಿ ಸಿದ್ಧಿದಾತ್ರಿ ದೇವಿ ಅವರನ್ನು 9 ದಿನ ಆರಾಧಿಸಲಾಗುತ್ತದೆ. ದೇವಿಯ 9 ಸ್ವರೂಪಗಳು  ಆರಾಧನೆಯ ಪರ್ವವೇ ನವರಾತ್ರಿ.ನವರಾತ್ರಿಯ 9 ದಿನ ದುರ್ಗೆಯ ಒಂಬತ್ತು  ರೂಪಗಳನ್ನು ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ನವರಾತ್ರಿಯ ಒಂದೊಂದು ದಿನವೂ ಅತ್ಯಂತ ಮಹತ್ವವಿದೆ.

” ನವರಾತ್ರಿಯ ಆಚರಣೆಯ ಮಹತ್ವ “

   ನವರಾತ್ರಿಯಲ್ಲಿ ದೇವಿ ತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿ ತತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು  ನವರಾತ್ರಿಯ ಕಾಲದಲ್ಲಿ ಶ್ರೀ ದುರ್ಗಾ ದೇವಿಯ ನಾಮ ಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

      ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರಿ, ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

” ನವರಾತ್ರಿಯ ವ್ರತವನ್ನು ಆಚರಿಸುವ ಪದ್ಧತಿ “

 ಅಖಂಡ ದೀಪ ಪ್ರಜ್ವಲನೆ ಅಂದರೆ ನವರಾತ್ರಿಯ ಒಂಬತ್ತು ದಿನದಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು,  ದೇವಿಯ ಮಹಾತ್ಮೆಯ  ಪಠಣ, ಲಲಿತಾ  ಪೂಜೆ,  ಸರಸ್ವತಿ ಪೂಜೆ, ಉಪವಾಸ,  ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿ ಸಾಮರ್ಥ್ಯಕ್ಕನುಸಾರವಾಗಿ   ನವರಾತ್ರಿ ಮಹೋತ್ಸವವನ್ನು  ಆಚರಿಸುತ್ತಾರೆ.

” ಆಚರಣೆಯ ವಿಧಾನ”

      ಗಂಡಸರು ಹೆಂಗಸರು ಮಕ್ಕಳು ಎಲ್ಲರೂ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸಾಲಂಕೃತವಾದ ವೇದಿಕೆಯಲ್ಲಿ ಶ್ರೀದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿ,ಆರಾಧಿಸಿ, ನವರಾತ್ರಿ ಕಳೆದ ನಂತರ ವಿಧಿಯುಕ್ತವಾಗಿ  ನದಿಯಲ್ಲಿ ಪ್ರತಿಮೆಯನ್ನು ವಿಸರ್ಜಿಸಲಾಗುತ್ತದೆ.  ಅಲ್ಲದೆ ಮನೆ ಮನೆಯಲ್ಲಿ ನಾನಾ ವಿಧವಾದ ಗೊಂಬೆಗಳನ್ನು ಪ್ರದರ್ಶಿಸಲಾಗುತ್ತದೆ. ಕರ್ನಾಟಕ ರಾಜ್ಯಗಳಲ್ಲಿ ಈ ಹಬ್ಬವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ.ಕರ್ನಾಟಕ , ಪಶ್ಚಿಮ ಬಂಗಾಳ,  ಅಸ್ಸಾಂ,  ಬಿಹಾರ್,  ಒರಿಸ್ಸಾ  ಮುಂತಾದ  ರಾಜ್ಯಗಳಲ್ಲಿ ಈ ಹಬ್ಬವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವೆಡೆ ಏಳನೇ ದಿನದಿಂದ 9ನೇ ದಿನದವರೆಗೆ ಮೂರು ದಿನ ಪುಸ್ತಕಗಳನ್ನು ಇಟ್ಟು, ಮೂರು ದಿನ ಸರಸ್ವತಿ ಪೂಜೆಯನ್ನು ನಡೆಸುತ್ತಾರೆ. ನವಮಿ ದಿನ ಆಯುಧ, ವಾಹನಾದಿಗಳನ್ನು ಪೂಜಿಸಲಾಗುವುದು.

 “ದುರ್ಗೆಯ ಒಂಬತ್ತು ಅವತಾರಗಳು “

         ದುಷ್ಟರ ಸಂಹಾರಕ್ಕಾಗಿ,  ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ ಅಸುರರನ್ನು ಸಂಹರಿಸಿದ  ಶಕ್ತಿ ರೂಪಿಣಿಯೇ ದುರ್ಗಾದೇವಿ. ನವ ರಾತ್ರಿಯ 9 ದಿನಗಳಲ್ಲಿ ನವದುರ್ಗೆಯರನ್ನಿಟ್ಟು  ಪೂಜಿಸಲಾಗುತ್ತದೆ.

  “ಶೈಲಪುತ್ರಿ”  ನವರಾತ್ರಿಯ ಮೊದಲನೇ ದಿನ ದುರ್ಗಾ ದೇವಿಯ ಮೊದಲನೆಯ ಸ್ವರೂಪ ಶೈಲಪುತ್ರಿ. ಪರ್ವತ  ರಾಜ ಹಿಮವಂತನ ಮಗಳು,  ಸೈಲಂ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹ  ವಿದೆಯೋ  ಅಂತಹ ಪರ್ವತ. ಆದ್ದರಿಂದ ಈಕೆ ಯನ್ನು ಶೈಲಪುತ್ರಿ ಎನ್ನಲಾಗುತ್ತದೆ. ಶೈಲಪುತ್ರಿ ರೂಪ ಅತ್ಯಂತ ಸುಂದರ,  ಶೈಲಪುತ್ರಿ ಪಾರ್ವತಿ ದೇವಿಯ ಪ್ರತಿರೂಪ. ವೃಷಭವಾಹನೆಯಾದ ದೇವಿ  ಸರಳ ವ್ಯಕ್ತಿತ್ವ ಸೌಮ್ಯ ರೂಪದ ಶಾಂತಿ ರೂಪಿಣಿ ಯಾಗಿ ಭಕ್ತರಿಗೆ ದರ್ಶನ ಕೊಡುತ್ತಾರೆ. ಸತಿ ದೇವಿಗೆ ಮುಂದಿನ ಜನ್ಮದಲ್ಲಿ 

ಶೈಲೆಯಾಗಿ ಹಿಮವಂತನಿಗೆ  ಪುತ್ರಿಯಾಗಿ ಜನಿಸಿ. ನಂತರ ಶೈಲಪುತ್ರಿ ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ವಿವಾಹವಾದಳು

      ದೇವಿಯ ಆರಾಧನೆ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ. ಶೈಲಪುತ್ರಿ ಆರಾಧನೆಯಿಂದ ವಿಶೇಷವಾದ ಪೂಜಾ ಫಲಗಳು  ಪ್ರಾಪ್ತಿಯಾಗುತ್ತವೆ. ಶೈಲಪುತ್ರಿಯ  ನಾಮಸ್ಮರಣೆಯ ಅತ್ತ್ಯಂತ ಶಕ್ತಿದಾಯಕ, ಇವಳ ಪೂಜೆಯಿಂದ ಕೋಮಲ ಚಿತ್ತದವರು ಬೆಟ್ಟದಷ್ಟು ಕಲ್ಲಾಗುತ್ತಾರೆ.   ದೇಹ ಪರ್ವತದಂತೆ ಸದೃಢವಾಗುತ್ತದೆ. ಕಷ್ಟಗಳನ್ನು ಎದುರಿಸುವ ಕಠೋರ ಶಕ್ತಿಯನ್ನು ತಾಯಿ ಕರುಣಿಸುತ್ತಾಳೆ. ದೇವಿಯ  ಆರಾಧನೆಯಿಂದ ಸಾಮಾನ್ಯ ವ್ಯಕ್ತಿಯು ಮಹಾ ಪುರುಷನಾಗುತ್ತಾನೆ.

      ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

Exit mobile version