Site icon TUNGATARANGA

ರಾಗಿಗುಡ್ಡ ಗಲಾಟೆ ನಾಲ್ವರು ಪೊಲೀಸರ ಸಸ್ಪೆಂಡ್, ಕಾನೂನು ಸುವ್ಯವಸ್ಥೆ ವಿಫಲವಾಗಿದ್ದು ಇವರಿಂದ ಮಾತ್ರನಾ? | ಜನರ ಪ್ರಶ್ನೆಗೆ ಉತ್ತರವೆಲ್ಲಿ..?

ರಾಗಿಗುಡ್ಡ: ಇನ್ಸ್‌ಪೆಕ್ಟರ್ ಅಭಯ್ ಸೇರಿದಂತೆ ನಾಲ್ವರ ಸಸ್ಪೆಂಡ್


ಶಿವಮೊಗ್ಗ, ಅ.೦9:
ರಾಗಿಗುಡ್ಡ ವ್ಯಾಪ್ತಿಯಲ್ಲಿ ಮಾತ್ರ ಈಗ ನಿಷೇದಾಜ್ಞೆ ಈಗ ಜಾರಿಯಲ್ಲಿದೆ. ಇಡೀ ಘಟನೆಯನ್ನು ಒಮ್ಮೆ ಅವಲೋಕಿಸಿದಾಗ ಕೊನೆಯ ಹಂತದ ಕಾರ್ಯಚಟುವಟಿಕೆಗಳಲ್ಲಿ ಒಂದಿಷ್ಟು ಪುಂಡರ ದಾಂಧಲೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿಸಿದ್ದು, ಸರಿಯಷ್ಟೆ. ಅದನ್ನು ಸಾರ್ವಜನಿಕವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಜಿಲ್ಲೆಯ ಬಹುತೇಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತ್ತಿಕ್ಕಿದ್ದಾರೆ.


ಇಡೀ ಘಟನೆಯನ್ನು ಮತ್ತೆ ಈಗ ತಮ್ಮ ಮುಂದೆ ಪೀಠಿಕೆ ಸಹಿತ ನೀಡಲು ಕಾರಣವಿಷ್ಟೇ. ಈಗಾಗಲೇ 25ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ. 65ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಘಟನೆ ನಡೆದು ರಾಗಿಗುಡ್ಡ ಸೇರಿದಂತೆ ಶಿವಮೊಗ್ಗ ಶಾಂತವಾಗುತ್ತಿರುವ ಈ ವಾರದ ನಂತರದ ಹೊತ್ತಿನಲ್ಲಿ ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರ್ದೇಶಕರ ಕೆ.ತ್ಯಾಗರಾಜನ್ ಅವರು ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು ನಾಲ್ವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.


ಈ ಅಂಶವನ್ನು ಒಪ್ಪಿಕೊಂಡೇ ಹೇಳುವುದಾದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ವಿಫಲವಾದ ಉದ್ದೇಶದಿಂದ ಪೊಲೀಸ್ ಇನ್ಸ್‌ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್ ಹಾಗೂ ಸಿಬ್ಬಂದಿಗಳಾದ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಎಂಬುವವರನ್ನು ಅಮಾನತುಗೊಳಿಸಿದ್ದಾರೆ.
ಇಡೀ ವ್ಯವಸ್ಥೆಯನ್ನು ಈ ನಾಲ್ವರು ಪೊಲೀಸರು ಮಾತ್ರ ನೋಡಿಕೊಳ್ಳುತ್ತಿದ್ದರಾ.? ಉಳಿದ ಪೊಲೀಸರು ಇರಲಿಲ್ಲವೇ. ಅಧಿಕಾರಿಗಳು ಇರಲಿಲ್ಲವೇ. ಈ ನಾಲ್ವರು ಹೇಗೆ ತಾನೆ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಇವರನ್ನು ಮಾತ್ರ ಅಮಾತುಗೊಳಿಸಿರುವುದು ಸರಿಯೇ..? ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ರಕ್ಷಣಾ ಇಲಾಖೆಗೆ ಅಷ್ಟೊಂದು ದೊಡ್ಡ ಮೆರವಣಿಗೆಯಲ್ಲಿ ಅಷ್ಟೇ ಪ್ರಮಾಣದ ಶಕ್ತಿ ಇತ್ತೇ ಎಂಬುದನ್ನು ಸಾರ್ವಜನಿಕರು ಹಾಗೂ ಸಮಾಜ ವಿವಿಧ ಸ್ಥರಗಳ ಪ್ರಮುಖರು ಪ್ರಶ್ನಿಸಿದ್ದಾರೆ.


ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರೇ ಈ ಗಲಾಟೆಯನ್ನು ಹತ್ತಿಕ್ಕಲು ಮುಂದಾಗಿದ್ದನ್ನು ನೇರವಾಗಿ ಅಂಕಣಕ್ಕಿಳಿದು ತಪ್ಪಿತಸ್ಥರನ್ನು ಸೆದೆಬಡಿಯುವಲ್ಲಿ ಯಶಸ್ವಿಯಾಗಿರುವುದನ್ನು ಎರಡೂ ಸಮುದಾಯದ ಪ್ರಮುಖರು ಹಾಗೂ ವಿವಿಧ ಗಣ್ಯರು ಪ್ರಶಂಸಿದ್ದಾರೆ. ಶ್ಲಾಘಿಸಿದ್ದಾರೆ. ಮಿಥುನ್ ಕುಮಾರ್ ಅವರಿಗೆ ಸಿಕ್ಕ ಈ ಶ್ಲಾಘನೆಯಲ್ಲಿ ಇನ್ಸ್‌ಪೆಕ್ಟರ್ ಅಭಯ್ ಅವರ ಪಾಲಿಲ್ಲವೇ..? ಅ ಪೊಲೀಸ್ ಕಾನ್ಸ್‌ಟೇಬಲ್ ಅವರ ಪಾಲಿಲ್ಲವೇ.?

ಈ ನಾಲ್ವರೇನಾದರೂ ಯಾವುದೋ ಒಂದು ಕೋಮಿನ ಜೊತೆ ಮೈತ್ರಿಯಾಗಿ ವ್ಯವಹಾರ ಮಾಡಿದ್ದಾರಾ.. ?ಏನಾದರೂ ಬೇರೆ ಚಟುವಟಿಕೆ ನಡೆಸಿದರಾ.. ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆಯಲ್ಲಿ ವಿಫಲವಾಗಿರುವ ಗ್ರಾಮಾಂತರ ಪೊಲೀಸ್ ಠಾಣೆಯ Mechanism ಅಮಾನತುಗೊಳಿಸಬೇಕಲ್ಲವೇ ಎಂಬುದು ನಮ್ಮ ಈ ಓದುಗ ಬಳಗದ ನೇರ ಪ್ರಶ್ನೆ.


ಶಿವಮೊಗ್ಗದಲ್ಲಿ ರಾಷ್ಟ್ರವ್ಯಾಪ್ತಿಯಲ್ಲಿ ಸುದ್ದಿಯಾದ ಹರ್ಷ ಕೊಲೆ ಪ್ರಕರಣ, ಹುಣಸೋಡು ಸ್ಫೋಟ ವಿಷಯಕ್ಕೆ ಸಂಬಂಧಪಟ್ಟಂತೆ ಯಾರೂ ತಪ್ಪಿತಸ್ಥ ಅಧಿಕಾರಿಗಳು ಕಂಡು ಬರಲಿಲ್ಲವೇ.? ಆಗ ಕಾಣದ ಕಾನೂನು ಸುವ್ಯವಸ್ಥೆ ಈಗ ಮಾತ್ರ ಕಂಡಿತಾ. ಹರ್ಷ ವಿಷಯವೂ ಸಹ ಎರಡು ಕೋಮಿನ ಜಗಳ ಎಂಬುದಾಗಿತ್ತಲ್ಲವೇ?

ಶಿವಮೊಗ್ಗ ಜನ ಕಂಡಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಈಗಲೂ ಜನಮೆಚ್ಚುಗೆಯ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಅಭಯ್‌ಪ್ರಕಾಶ್ ಅಮಾನತು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಬೇಕಾದ ಹಿರಿಯ ಪೊಲೀಸ್ ಅಧಿಕಾರಿ ಇತ್ತ ಗಮನಹರಿಸಿ ಉತ್ತರಿಸಲಿ.

Exit mobile version