Site icon TUNGATARANGA

ಆಶಾ ಕಾರ್ಯಕರ್ತೆಯರು ಮಹಿಳೆಯರ | ಋತುಬಂಧದ ಕುರಿತು ಜಾಗೃತಿ ಮೂಡಿಸಿ : ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ


ಶಿವಮೊಗ್ಗ ಅಕ್ಟೋಬರ್ 05,
     ಋತುಬಂಧದ ವೇಳೆ ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.
    ಅವರು ದಿ: 30-09-2023 ರಂದು ಸೋಹಂ ಫೌಂಡೇಷನ್

ಹಾಘೂ ಮಿರರ್ ಥೆರಪ್ಯುಟಿಕ್ಸ್ ಸಂಸ್ಥೆ ಬೆಂಗಳೂರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಶಿವಮೊಗ್ಗ ಇವರ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ‘ಮಿರರ್-ಋತುಬಂಧ ಜಾಗೃತಿ ಎಲ್ಲರಿಗೂ’ ಎಂಬ ವಿಷಯ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


     ಗ್ರಾಮೀಣ ಭಾಗದ ಹೆಣ್ಣುಮಕ್ಕಳಲ್ಲಿ ಋತುಬಂಧ ವಿಷಯದ ಕುರಿತು ಸಂಕೋಚ ಹೆಚ್ಚಿರುತ್ತದೆ. ಇಲ್ಲಿ ತರಬೇತಿ ಹೊಂದಿದ ಆಶಾ ಕಾರ್ಯಕರ್ತೆಯರು ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು, ವ್ಯಾಯಾಮದ ಕುರಿತು ತಿಳಿಸಬೇಕು ಜೊತೆಗೆ ಆರೋಗ್ಯ ವೃದ್ದಿಗೆ ಅಗತ್ಯ ಸೇವೆಗಳನ್ನು ನೀಡುವ ಮೂಲಕ ನೆರವಾಗಬೇಕು.


    ನಿಗದಿತ ಮನೆಕೆಲಸ, ತೋಟದ ಕೆಲಸದೊಂದಿಗೆ ಪೌಷ್ಟಿಕ ಆಹಾರ, ಸಿರಿಧಾನ್ಯ, ರಾಗಿ, ಬೀನ್ಸ್, ಮಾಂಸ, ಮೀನು, ಹಾಲು, ಮೊಟ್ಟೆ ಹಾಗೂ ವಿವಿಧ ರೀತಿಯ ಹಣ್ಣು, ಸೊಪ್ಪು, ತರಕಾರಿಗಳನ್ನು ಸೇವಿಸಬೇಕು. ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಬಳಸಬೇಕೆಂದರು.


      ಯೂನಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಪ್ರಿಯಂವದ ಮಾತನಾಡಿ, ಋತುಬಂಧದ ಸಮಸ್ಯೆ ಕುರಿತು ಮಹಿಳೆಯರು ನಿರ್ಲಕ್ಷ್ಯ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.


      ಸೋಹಂ ಫೌಂಡೇಷನ್ ಮತ್ತು ಮಿರರ್ ಥೆರಪ್ಯುಟಿಕ್ಸ್‍ನ ಗ್ರೇಸ್ ಮಿಶ್ರಾ ಮತ್ತು ಅನಿಲ್ ಕುಮಾರ್ ತರಬೇತಿ ನೀಡಿದರು.
     ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಶಮಾ, ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version